ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ.
ಈ ಕುರಿತು ಮಾಹಿತಿ ನೀಡಿದ ಭಾರತೀಯ ಸೇನೆ, ಅಕ್ಟೋಬರ್ 21 ರಿಂದ 23 ರ ನಡುವೆ ಉಗ್ರರು ಸತತವಾಗಿ ಉರಿ ಸೆಕ್ಟರ್ನಿಂದ ಭಾರತದ ಗಡಿ ನಿಯಂತ್ರಣ ರೇಖೆಯನ್ನು ನುಗ್ಗಿ ಬರಲು ಯತ್ನ ನಡೆಸಿದ್ದಾರೆ. ಇದರ ಮಾಹಿತಿ ಅರಿತ ಭದ್ರತಾ ಪಡೆಗಳು ಜಮ್ಮು ಕಾಶ್ಮೀರದ ಪೊಲೀಸರ ಜತೆಗೂಡಿ ಜಂಟಿ ಕಾರ್ಯಾಚರಣೆಗಿಳಿದು, ಒಳನುಸುಳಿ ಬರುತ್ತಿದ್ದ ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಇದರಿಂದ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಅಂತಿಮವಾಗಿ ಭಾರತೀಯ ಸಶಸ್ತ್ರ ಪಡೆಗಳು ಉಗ್ರರನ್ನು ಹಿಂದೆ ಸರಿಯುವಂತೆ ಮಾಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.ಪಿಸ್ತೂಲ್,ಗ್ರೆನೇಡ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
‘ಉರಿ ಸೆಕ್ಟರ್‌ನ ಬಾರಾಮುಲ್ಲಾದ ಗಡಿಯಲ್ಲಿ ಪಾಕಿಸ್ತಾನ ಕಡೆಯಿಂದ ಭಯೋತ್ಪಾದಕರು ಒಳನುಸುಳುವ ಸಂಚು ರೂಪಿಸಿದ್ದರು. ಗುಪ್ತಚರ ದಳ ಮಾಹಿತಿ ಆಧಾರದ ಮೇಲೆ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಭದ್ರತಾ ಪಡೆಗಳು ಜಂಟಿಯಾಗಿ ಈ ಸಂಚನ್ನು ವಿಫಲಗೊಳಿಸಲಾಗಿದೆ’ ಎಂದಿದೆ.
ಒಳನುಸುಳುತ್ತಿದ್ದ ಭಯೋತ್ಪಾದಕರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಚಕಮಕಿಯಲ್ಲಿ ಯಾವುದೇ ಹಾನಿಯಾದ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ಘರ್ಷಣೆ ನಡೆದ ಪ್ರದೇಶದಲ್ಲಿ ಉಗ್ರರಿಗೆ ಸೇರಿದ್ದ 6 ಪಿಸ್ತೂಲ್‌ಗಳು ಮತ್ತು 4 ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ತಿಳಿಸಿದೆ.