ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊ ಜಂಟಿಯಾಗಿ ಕೈಗೊಳ್ಳಲಿರುವ ಬಾಹ್ಯಾಕಾಶ ಯಾನ ಯೋಜನೆಗೆ ಭಾರತದ ವಾಯು ಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಆಯ್ಕೆಯಾಗಿದ್ದಾರೆ.
ಬಾಹ್ಯಾಕಾಶ ನಿಲ್ದಾಣಕ್ಕೆ ತನ್ನ ಆಕ್ಸಿಯಮ್-4 ಮಿಷನ್‌ಗಾಗಿ ಇಸ್ರೋದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (HSFC) ಅಮೆರಿಕ ಮೂಲದ ಆಕ್ಸಿಯೋಮ್ ಸ್ಪೇಸ್ನೊಂದಿಗೆ ಮುಂಬರುವ ಆಕ್ಸಿಯಮ್ -4 ಮಿಷನ್‌ಗಾಗಿ ಬಾಹ್ಯಾಕಾಶ ಹಾರಾಟ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ ಗ್ರೂಪ್ ಕ್ಯಾಪ್ಟನ್ ಶುಕ್ಲಾ ಪ್ರೈಮರಿ ಮಿಷನ್ ಪೈಲಟ್ ಆಗಿದ್ದರೆ, ಭಾರತೀಯ ವಾಯುಪಡೆಯ ಮತ್ತೊಬ್ಬ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಬ್ಯಾಕಪ್ ಮಿಷನ್ ಪೈಲಟ್ ಆಗಿದ್ದಾರೆ.
‘ಗಗನಯಾತ್ರಿ’ ಎಂದೂ ಕರೆಯಲ್ಪಡುವ ಇಬ್ಬರೂ ಅಧಿಕಾರಿಗಳ ತರಬೇತಿ ಆಗಸ್ಟ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಯೋಜನೆ ಅವಧಿಯಲ್ಲಿ ಅಧಿಕಾರಿಗಳು ಐಎಸ್ಎಸ್ನಲ್ಲಿ ಆಯ್ದ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರದರ್ಶನ ಪ್ರಯೋಗಗಳನ್ನು ನಡೆಸಲಿದ್ದಾರೆ. ಬಾಹ್ಯಾಕಾಶ ಕುರಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.ಆಕ್ಸಿಯೋಮ್ -4 ಮಿಷನ್ ಸಿಬ್ಬಂದಿಗಳ ಪಟ್ಟಿಯಲ್ಲಿ ಅಮೆರಿಕದ ಪೆಗ್ಗಿ ವಿಟ್ಸನ್ (ಕಮಾಂಡರ್), ಭಾರತದ ಗ್ರೂಪ್ ಕ್ಯಾಪ್ಟನ್ ಶುಕ್ಲಾ (ಪೈಲಟ್), ಪೋಲೆಂಡ್ನ ಸಾವೋಜ್ ಉಜ್ನಾನ್ಸ್ಕಿ (ಮಿಷನ್ ಸ್ಪೆಷಲಿಸ್ಟ್) ಮತ್ತು ಹಂಗೇರಿಯ ಟಿಬೋರ್ ಕಾಪು (ಮಿಷನ್ ಸ್ಪೆಷಲಿಸ್ಟ್) ಇದ್ದಾರೆ.
ಕಳೆದ ವರ್ಷ ವಾಯುಪಡೆಯಿಂದ ನಾಲ್ಕು ಪರೀಕ್ಷಾ ಪೈಲಟ್ಗಳನ್ನು ಆಯ್ಕೆ ಮಾಡಲಾಗಿತ್ತು. ಅವರ ಪ್ರಾಥಮಿಕ ತರಬೇತಿಯನ್ನು ಬೆಂಗಳೂರಿನ ಇಸ್ರೋದ ಗಗನಯಾತ್ರಿ ತರಬೇತಿ ಸೌಲಭ್ಯದಲ್ಲಿ ಪ್ರಾರಂಭಿಸಲಾಗಿತ್ತು. ಗಗನಯಾನ ಮಿಷನ್ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಭಾರತದ ಮಾನವ ಬಾಹ್ಯಾಕಾಶ ಹಾರಾಟ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಮೂರು ದಿನಗಳ ಕಾರ್ಯಾಚರಣೆಗಾಗಿ ಮೂವರು ಸದಸ್ಯರ ತಂಡವನ್ನು 400 ಕಿ.ಮೀ ಕಕ್ಷೆಗೆ ಉಡಾಯಿಸಲು ಮಿಷನ್ ಯೋಜನೆ ರೂಪಿಸಿದೆ. ಇದು ಭಾರತೀಯ ಜಲಪ್ರದೇಶದಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳುವುದರ ಮೂಲಕ ಕೊನೆಗೊಳ್ಳುತ್ತದೆ.
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಯಾರು?
ಲಕ್ನೋದಲ್ಲಿ ಜನಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಸುಮಾರು 18 ವರ್ಷಗಳ ಹಿಂದೆ ಕಠಿಣ ಮತ್ತು ದೀರ್ಘ ಮಿಲಿಟರಿ ತರಬೇತಿಗಾಗಿ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರಿದ್ದರು. ಅಲ್ಲಿಂದ ಭಾರತೀಯ ವಾಯುಪಡೆಯಲ್ಲಿ ಅವರ ಪ್ರಯಾಣ ಪ್ರಾರಂಭವಾಯಿತು.
ಶುಕ್ಲಾ ಅವರ ಹಿರಿಯ ಸಹೋದರಿಯ ಹೇಳುವಂತೆ, ಕಾರ್ಗಿಲ್ ಯುದ್ಧ ಸಮಯದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗದ ವೀರ ಕಥೆಗಳನ್ನು ಓದಿದ ನಂತರ ಸೇನೆ ಸೇರಲು ಪ್ರೇರಣೆ ಪಡೆದಿದ್ದರು. 1999 ರಲ್ಲಿ ಕಾರ್ಗಿಲ್ನಲ್ಲಿ ಯುದ್ಧ ಪ್ರಾರಂಭವಾದಾಗ ಪಾಕಿಸ್ತಾನದ ಒಳನುಸುಳುವವರು ನಿಯಂತ್ರಣ ರೇಖೆಯನ್ನು (ಎಲ್ಒಸಿ) ದಾಟಿ ಭಾರತೀಯ ಪೋಸ್ಟ್ಗಳನ್ನು ಅತಿಕ್ರಮಿಸಿದಾಗ ಅವರಿಗೆ ಕೇವಲ 14 ವರ್ಷ ವಯಸ್ಸಾಗಿತ್ತು.