ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಕ್ಯಾಪ್ಟನ್ ಶುಭಾಂಶು ಶುಕ್ಲಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಐತಿಹಾಸಿಕ ಬಾಹ್ಯಾಕಾಶ ಯಾನಕ್ಕೆ ಭಾರತ ಸಜ್ಜಾಗಿದ್ದು, ನಿಯೋಜಿತ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮುಂದಿನ ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ ಎಂದು ಕೇಂದ್ರ ಹೇಳಿದೆ.

ಇಸ್ರೋ ಹೊಸ ಮೈಲುಗಲ್ಲು ದಾಖಲಿಸುತ್ತಿರುವಾಗ ಭಾರತೀಯ ಗಗನಯಾತ್ರಿಯೊಬ್ಬರು ಐತಿಹಾಸಿಕ ಬಾಹ್ಯಾಕಾಶ ಯಾನಕ್ಕೆ ಸಜ್ಜಾಗಿದ್ದಾರೆ. ಗಗನಯಾನ ಸಿದ್ಧತೆ, ಐಎಸ್ಎಸ್ ಮಿಷನ್ ಮತ್ತು ಉಡಾವಣೆಗಳೊಂದಿಗೆ ಭಾರತದ ಬಾಹ್ಯಾಕಾಶ ಕನಸುಗಳು ಎತ್ತರಕ್ಕೆ ಏರುತ್ತಿವೆ ಎಂದು ಕೇಂದ್ರ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಕಳೆದ ಎಂಟು ತಿಂಗಳಿಂದ ನಾಸಾ ಮತ್ತು ಖಾಸಗಿ ಬಾಹ್ಯಾಕಾಶ ಕಂಪನಿ ಆಕ್ಸಿಯಮ್ ಸ್ಪೇಸ್‌ನಲ್ಲಿ ತರಬೇತಿ ಪಡೆಯುತ್ತಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ, ಭಾರತ 60 ಮಿಲಿಯನ್‌ ಡಾಲರ್‌ಗಿಂತಲೂ ಹೆಚ್ಚು ಹಣವನ್ನು ಪಾವತಿಸಿರುವ ಖಾಸಗಿ ವಾಣಿಜ್ಯ ಕಾರ್ಯಾಚರಣೆಯಲ್ಲಿ ISSಗೆ ಹಾರುತ್ತಿದ್ದಾರೆ. ಈ ಕಾರ್ಯಾಚರಣೆಯನ್ನು ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ನಲ್ಲಿ ಉಡಾವಣೆ ಮಾಡಲಾಗುವುದು. ನಾಲ್ವರು ಸಿಬ್ಬಂದಿಯನ್ನು ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಕೂರಿಸಲಾಗುವುದು. ಇದು ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.

ಗ್ರೂಪ್ ಕ್ಯಾಪ್ಟನ್ ಶುಕ್ಲಾ 40 ವರ್ಷ ವಯಸ್ಸಿನವರಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಗಗನಯಾತ್ರಿಗಳಲ್ಲಿ ಅತ್ಯಂತ ಕಿರಿಯರನ್ನು ಈ ಕಾರ್ಯಾಚರಣೆಗೆ ಆಯ್ಕೆ ಮಾಡಿದೆ.

ಆಕ್ಸಿಯಮ್-4 ಮಿಷನ್‌ನ ಕಮಾಂಡರ್ ಆಗಿ ನಾಸಾದ ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ಕಾರ್ಯನಿರ್ವಹಿಸಲಿದ್ದಾರೆ. ಅವರು ಈಗ ಆಕ್ಸಿಯಮ್ ಸ್ಪೇಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇತರ ಇಬ್ಬರು ಸಿಬ್ಬಂದಿ ಸದಸ್ಯರು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ (ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿ ಮತ್ತು ಮಿಷನ್ ತಜ್ಞರಾಗಿದ್ದಾರೆ), ಹಂಗೇರಿಯ ಟಿಬೋರ್ ಕಾಪು ಕೂಡ ಅದೇ ಪಾತ್ರವನ್ನು ವಹಿಸುತ್ತಾರೆ. ಗ್ರೂಪ್ ಕ್ಯಾಪ್ಟನ್ ಶುಕ್ಲಾ ಈ ಮಿಷನ್‌ನ ಪೈಲಟ್ ಆಗಿರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!