ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ವಯಸ್ಸಾಗುತ್ತ ಹೋದಂತೆ ಜ್ಞಾಪಕ ಶಕ್ತಿ ಕುಗ್ಗುವುದಿಲ್ಲ. ಯಾರು ಬೇಕಾದರೂ ಜ್ಞಾನಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ ಎಂದು ಇಂಡಿಯನ್ ಮೆಮೊರಿ ಚಾಂಪಿಯನ್‍ಶಿಪ್ 2023 ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ದೀಪಕ್ ಅವರು ತಿಳಿಸಿದರು.
ಇಂಡಿಯನ್ ಮೆಮೊರಿ ಚಾಂಪಿಯನ್‍ಶಿಪ್ 2023 ಕಾರ್ಯಕ್ರಮದಲ್ಲಿ ಕರ್ನಾಟಕದ 140 ಮಕ್ಕಳು ಮತ್ತು ಇತರ ಕಡೆಗಳಿಂದ 160 ಮಕ್ಕಳು ಬಂದಿದ್ದಾರೆ. ಈ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು.
ಕಳೆದ 13 ವರ್ಷಗಳಿಂದ ಈ ಸ್ಪರ್ಧೆ ನಡೆಯುತ್ತಿದೆ. ಈ ಬಾರಿ 14ನೇ ವರ್ಷದ ಸ್ಪರ್ಧೆ ನಡೆದಿದೆ ಎಂದರು.
ಶೈಕ್ಷಣಿಕ ಮತ್ತು ಸ್ಪರ್ಧಾತ್ಮಕತೆ ಹೆಚ್ಚಳಕ್ಕೆ ಈ ಜ್ಞಾಪಕಶಕ್ತಿ ಹೆಚ್ಚಳವು ಪ್ರಯೋಜನಕಾರಿ. 100ರಿಂದ 200 ಸಂಖ್ಯೆಯನ್ನು ಕೊಟ್ಟರೂ ಅದನ್ನು ಕೆಲವೇ ನಿಮಿಷಗಳಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.
ಈ ಮೊದಲು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿ ರಾಜ್ಯ ಮಟ್ಟದ ಸ್ಪರ್ಧೆಗಳು ನಡೆದಿದ್ದವು. ಅದರಲ್ಲಿ ಗೆದ್ದವರು ಈಗ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಲಂಡನ್ ಅಥವಾ ಹಾಂಗ್‍ಕಾಂಗ್‍ನಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗಳು ನಡೆಯಲಿವೆ. ಇದು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿ ಎಂದು ನುಡಿದರು.
2024ರಲ್ಲಿ 43 ದೇಶಗಳ ಗರಿಷ್ಠ ನೆನಪುಶಕ್ತಿ ಉಳ್ಳವರನ್ನು ಬೆಂಗಳೂರಿಗೆ ಕರೆಸಿಕೊಂಡು ಕಾರ್ಯಕ್ರಮ ನಡೆಸಲು ಯೋಜಿಸಿದ್ದೇವೆ ಎಂದು ಅವರು ವಿವರಿಸಿದರು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಯೋಜನೆ ಇದೆ ಎಂದು ತಿಳಿಸಿದರು. ಬೆಂಗಳೂರನ್ನು ಹೆಮ್ಮೆಯ ಪ್ರದೇಶವಾಗಿ ಹೊರಹೊಮ್ಮಿಸಲು ಯೋಜಿಸಿದ್ದೇವೆ ಎಂದರು.
ಮಾಜಿ ಕಾರ್ಪೊರೇಟರ್ ಶ್ರೀಮತಿ ಹೇಮಲತಾ ಸತೀಶ್ ಸೇಠ್, ಬಿಲ್ಡಿಂಗ್ ಬ್ಲಾಕ್ಸ್ ಗ್ರೂಪಿನ ಚಯರ್‍ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಮಲ್ಲಿಕಾರ್ಜುನ ರೆಡ್ಡಿ, ಸಿನಿಮಾ ನಟ ವಿಜಯ್ ರಾಘವೇಂದ್ರ, ಬಿಜಿಎಫ್ ವಲ್ರ್ಡ್ ಸ್ಕೂಲಿನ ಪ್ರಿನ್ಸಿಪಾಲ್ ವಿಂಗ್ ಕಮಾಂಡರ್ ರಂಜಿತ್ ಕುಮಾರ್ ಮಂಡಲ್ ಅವರು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸೌಂದರ್ಯ ಸಮೂಹ ಸಂಸ್ಥೆಯ ಸಿಇಒ ಕೀರ್ತನ್‍ಕುಮಾರ್, ಬೆಂಗಳೂರು ಐಐಎಂನ ವಿಶ್ವನಾದ್ ರಾಜು, ವಿಜ್ಞಾನಿ ಗಣಪುರಂ ವೇಣು, ಉದ್ಯಮಿ ವಿಜಯ್ ಆರ್ಕೋಟ್, ದಯಾನಂದ ಸಾಗರ್ ಸಂಸ್ಥೆಯ ಉಪ ಪ್ರಾಂಶುಪಾಲ ಹೇಮಂತ್ ಉಪ್ಪಳ, ವಕೀಲರಾದ ಬಿ.ಕೆ.ನರೇಂದ್ರಬಾಬು, ಡಾ.ಮಹೇಶ್‍ಕುಮಾರ್ ಕೆ.ಆರ್. ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.