ಪ್ರಿಯಾಂಕಾ ಮೋಹಿತೆ ಖಾತೆಗೆ ಮತ್ತೊಂದು ಸಾಧನೆ: ಕಾಂಚನಜುಂಗಾ ಏರುವ ಮೂಲಕ ಇತಿಹಾಸ ನಿರ್ಮಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ. ಅವಕಾಶಕ್ಕಾಗಿ ಕಾಯದೆ ಹೊಸ ಅವಕಾಶಗಳನ್ನು ಸ್ವತಃ ಸೃಷ್ಟಿಸಿಕೊಂಡು ವಿಜಯ ಪತಾಕೆ ಹಾರಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಪರ್ವತಾರೋಹಣದಲ್ಲಿ ದಾಖಲೆ ಸೃಷ್ಟಿಸಿದ್ದ ಪ್ರಿಯಾಂಕಾ ಮೋಹಿತೆ ವಿಶ್ವದ ಮೂರನೇ ಅತಿ ಎತ್ತರದ ಪರ್ವತ “ಕಾಂಚನಜುಂಗಾ” ಏರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಪಶ್ಚಿಮ ಮಹಾರಾಷ್ಟ್ರದ ಸತಾರಾದ ಪ್ರಿಯಾಂಕಾ ಮೋಹಿತೆ (30) ಗುರುವಾರ ಕಾಂಚನಜುಂಗಾ ಪರ್ವತವನ್ನು ಏರಿ, ಈ ಮೂಲಕ 8,000 ಮೀಟರ್‌ಗಿಂತಲೂ ಹೆಚ್ಚು ಎತ್ತರದ ಐದು ಶಿಖರಗಳನ್ನು ಏರಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪ್ರಿಯಾಂಕಾ ಪಾತ್ರರಾಗಿದ್ದಾರೆ. ಕಾಂಚನಜುಂಗಾ ಪರ್ವತದ ಎತ್ತರ 8,586 ಮೀಟರ್. 2020 ರಲ್ಲಿ ತೇನ್ಸಿಂಗ್ ನಾರ್ಗೆ ಸಾಹಸ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರಿಯಾಂಕಾ, ಏಪ್ರಿಲ್ 2021 ರಲ್ಲಿ ವಿಶ್ವದ 10 ನೇ ಅತಿ ಎತ್ತರದ ಅನ್ನಪೂರ್ಣ (8,091 ಮೀ) ಶಿಖರವನ್ನು ಏರಿದರು.

ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಕೂಡ ಪ್ರಿಯಾಂಕಾ. 2013 ರಲ್ಲಿ ವಿಶ್ವದ ಅತಿ ಎತ್ತರದ ಶಿಖರವಾದ ಎವರೆಸ್ಟ್ (8,849 ಮೀ), 2018 ರಲ್ಲಿ ಮೌಂಟ್ ಲೋಟ್ಜೆ (8,516 ಮೀ), ಮೌಂಟ್ ಮಕಾವು (8,485 ಮೀ) ಮತ್ತು 2016 ರಲ್ಲಿ ಮೌಂಟ್ ಕಿಲಿಮಂಜಾರೋ (5,895 ಮೀ) ಏರಿದ್ದಾರೆ. ಬಾಲ್ಯದಿಂದಲೂ ಪರ್ವತಾರೋಹಣದ ಬಗ್ಗೆ ಒಲವು ಹೊಂದಿದ್ದ ಪ್ರಿಯಾಂಕಾ ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಗೆ ಹಲವು ಬಾರಿ ಭೇಟಿ ನೀಡಿದ್ದರು. 2012 ರಲ್ಲಿ ಬಂದರ್‌ಪಂಚ್ ಮತ್ತು 2015 ರಲ್ಲಿ ಮೌಂಟ್ ಮೆಂಟೋಸಾವನ್ನು ಸಹ ಏರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!