ಹೊಸದಿಗಂತ ಡಿಜಿಟಲ್ ಡೆಸ್ಕ್:
ಹವಾಮಾನ ಬದ್ಧತೆಗಳಿಗೆ ಸಂಬಂಧಿಸಿ ಭಾರತದ ಸಮರ್ಪಣೆ ಅದರ ಕಾರ್ಯಕ್ಷಮತೆಯಿಂದಲೇ ಸರ್ವವೇದ್ಯ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಹವಾಮಾನ ವೈಫರಿತ್ಯ ಎದುರಿಸುವಲ್ಲಿ ಭಾರತದ ಪ್ರಯತ್ನಗಳನ್ನು ಜಿ-7 ಶ್ರೀಮಂತ ರಾಷ್ಟ್ರಗಳು ಬೆಂಬಲಿಸುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ ದೇಶದಲ್ಲಿ ಹೊರಹೊಮ್ಮುತ್ತಿರುವ ಶುದ್ಧ ಇಂಧನ ತಂತ್ರಜ್ಞಾನಗಳಿಗೆ ಬೃಹತ್ ಮಾರುಕಟ್ಟೆ ಪಡೆಯಲು ಅವರನ್ನು ಆಹ್ವಾನಿಸಿದರು.
ಜಿ-7 ಶೃಂಗಸಭೆಯಲ್ಲಿ ‘ಉತ್ತಮ ಭವಿಷ್ಯದಲ್ಲಿ ಹೂಡಿಕೆ, ಹವಾಮಾನ, ಶಕ್ತಿ, ಆರೋಗ್ಯ’ ಕುರಿತ ಅವೇಶನದಲ್ಲಿ ಮಾತನಾಡಿದ ಪ್ರಧಾನಿಯವರು, ಈ ಕ್ಷೇತ್ರಗಳಲ್ಲಿ ಭಾರತದ ದಾಖಲೆಯನ್ನು ಎತ್ತಿ ತೋರಿದರು .ಅಸಾಂಪ್ರದಾಯಿಕ ಮೂಲಗಳಿಂದ ಶೇ.40 ರಷ್ಟು ಇಂಧನ ಸಾಮರ್ಥ್ಯದ ಗುರಿಯನ್ನು ಸಾಸಿದೆ ಎಂಬುದರತ್ತ ಬೊಟ್ಟು ಮಾಡಿದರು.
ಇದೇ ರೀತಿ, ಪೆಟ್ರೋಲ್‌ನಲ್ಲಿ ಶೇ.10 ರಷ್ಟು ಎಥೆನಾಲ್ ಮಿಶ್ರಣ ಮಾಡುವ ನಿಗದಿತ ಗುರಿಯನ್ನು 5 ತಿಂಗಳ ಮೊದಲೇ ಸಾಧಿಸಲಾಗಿದೆ. ಭಾರತವು ವಿಶ್ವದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣವನ್ನು ಹೊಂದಿದೆ. ಈ ದಶಕದಲ್ಲೇ ಭಾರತೀಯ ಬೃಹತ್ ರೈಲ್ವೆ ವ್ಯವಸ್ಥೆಯಲ್ಲಿ ವಾಯುಮಾಲಿನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ನಾವು ಉದ್ದೇಶಿಸಿದ್ದೇವೆ ಎಂದರು.
ಅಭೂತಪೂರ್ವ ಸ್ವಾಗತ
ಇದಕ್ಕೂ ಮುನ್ನ, ಜರ್ಮನಿಯ ಚಾನ್ಸೆಲರ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ದಕ್ಷಿಣ ಜರ್ಮನಿಯ ಸ್ಕ್ಲೋಸ್ ಎಲ್ಮೌವಿನ ಆಲ್ಪೈನ್ ಕ್ಯಾಸಲ್‌ನಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಆಗಮಿಸಿದ ಮೋದಿಯವರಿಗೆ ಅಭೂತಪೂರ್ವ ಸ್ವಾಗತ ನೀಡಲಾಗಿತ್ತು. ಅಲ್ಲದೆ ಜಿ-7 ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರೂಡೊ ಅವರಿಂದ ಅಭಿನಂದನೆ ಸ್ವೀಕರಿಸಿದರು.
ಭಾರತದಂತಹ ದೊಡ್ಡ ದೇಶವು ಅಂತಹ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸಿದಾಗ, ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಕೂಡಾ ಸೂರ್ತಿ ಪಡೆಯುತ್ತವೆ. ಜಿ-7 ಶ್ರೀಮಂತ ರಾಷ್ಟ್ರಗಳು ಭಾರತದ ಪ್ರಯತ್ನಗಳನ್ನು ಬೆಂಬಲಿಸುತ್ತವೆ ಎಂಬ ನಿರೀಕ್ಷೆ ನಮ್ಮದು.ಇಂದು ಭಾರತದಲ್ಲಿ ಶುದ್ಧ ಇಂಧನ ತಂತ್ರಜ್ಞಾನಗಳಿಗೆ ದೊಡ್ಡ ಮಾರುಕಟ್ಟೆ ಯಾಗಿ ಹೊರಹೊಮ್ಮುತ್ತಿದೆ.ಜಿ-7 ರಾಷ್ಟ್ರಗಳು ಈ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಉತ್ಪಾದನೆಯಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶವಿರುವ ಬಗ್ಗೆ ಅವರು ಒತ್ತಿ ಹೇಳಿದರು.
ಹವಾಮಾನ, ಇಂಧನ ಮತ್ತು ಆರೋಗ್ಯ ಕುರಿತ ಜಿ-7 ಅವೇಶನದಲ್ಲಿ ಶುದ್ಧ ಇಂಧನ, ಸುಸ್ಥಿರ ಜೀವನ ಶೈಲಿ ಮತ್ತು ವಿಶ್ವದ ಹಿತಕ್ಕಾಗಿ ಭಾರತದ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಎತ್ತಿ ತೋರಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.