Tuesday, August 16, 2022

Latest Posts

ಅನನ್ಯ ಸ್ವಾತಂತ್ರ್ಯ ಹೋರಾಟಗಾರ- ಸಾಮಾಜಿಕ ಸುಧಾರಣೆಗಳ ಹರಿಕಾರ ಕಡಿದಾಳ್‌ ಮಂಜಪ್ಪ..

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸ್ವಾತಂತ್ರ್ಯ ಹೋರಾಟಗಾರ, ವಕೀಲ, ರಾಜಕೀಯ ಧುರೀಣ ಹಾಗೂ ಕಾದಂಬರಿಕಾರರಾಗಿ ಅಪಾರ ಪ್ರಖ್ಯಾತಿ ಸಂಪಾದಿಸಿದವರು ಕಡಿದಾಳ್‌ ಮಂಜಪ್ಪನವರು. ಇವರು 1907ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗೊಳಿಗೆ ಗ್ರಾಮದಲ್ಲಿ ಜನಿಸಿದರು.
ವಿದ್ಯಾಭ್ಯಾಸದ ಬಳಿಕ 1935ರಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಮಂಜಪ್ಪ, ಅದೇ ವರ್ಷ ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ಪಡೆದರು. ಪ್ರೌಢಶಾಲೆಯಲ್ಲಿ ಓದುವ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಬಂದಿದ್ದ ಗಾಂಧೀಜಿ ಅವರಿಂದ ಪ್ರಭಾವಕ್ಕೊಳಗಾದ ಮಂಜಪ್ಪ ಮುಂದೆ ಅಪ್ಪಟ ಗಾಂಧಿವಾದಿಯಾಗಿ ಗುರುತಿಸಿಕೊಂಡರು. ಗಾಂಧಿ ಯಂಗ್ಇಂಡಿಯಾ ಪತ್ರಿಕೆಗೆ ಬರೆಯುತ್ತಿದ್ದ ಲೇಖನಗಳಿಂದ ಮಂಜಪ್ಪ ಅಪಾರವಾಗಿ ಪ್ರಭಾವಿತರಾಗಿ ಚಿಕ್ಕಂದಿನಲ್ಲೇ ಸ್ವಾತಂತ್ರ್ಯ ಹೋರಾಟ ರಂಗಕ್ಕೆ ಧುಮುಕಿದರು. 1937ರಿಂದ ಮೂರು ವರ್ಷಗಳ ಕಾಲ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. 1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ದೇಶಾದ್ಯಂತ ಬಿರುಸುಪಡೆದಾಗ ಸಕ್ರಿಯವಾಗಿ ಹೋರಾಟಗಳಲ್ಲಿ ತೊಡಗಿಕೊಂಡ ಮಂಜಪ್ಪನವರು 9 ತಿಂಗಳುಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ಮೈಸೂರಿನಲ್ಲಿ ಸರ್ಕಾರ ಸ್ಥಾಪನೆಯ ಸಂಬಂಧ ನಡೆದ ಚಳವಳಿ ವೇಳೆಯಲ್ಲಿಯೂ ಹಲವಾರು ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು.
1941-45ರ ಅವಧಿಯಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಚುನಾಯಿತರಾದ ಅವರು, 1942-52ರ ಅವಧಿಯಲ್ಲಿ ಮೈಸೂರು ನ್ಯಾಯವಿಧಾಯಕ ಸಭೆ ಮತ್ತು ರಾಜ್ಯಾಂಗ ಸಭೆಗಳ ಕಾಂಗ್ರೆಸ್ ಸದಸ್ಯರಾಗಿ, 1952-67ರ ಅವಧಿಯವರೆಗೆ ವಿಧಾನಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದರು.
ಆ ಬಳಿಕ ಆಗಸ್ಟ್‌ 19, 1956ರಿಂದ ಅಕ್ಟೋಬರ್‌ 31, 1956ರ ವರೆಗೆ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. 1950ರ ದಶಕದಲ್ಲಿ ಭೂ ಸುಧಾರಣೆಯಲ್ಲಿ ಇವರ ಪಾತ್ರ ಹಿರಿದು. ಜಮೀನ್ದಾರ್‌ ಪದ್ಧತಿಯನ್ನು ನಿರ್ಮೂಲನೆ ಗೊಳಿಸಿ ಉಳುವವರಿಗೆ ಭೂಮಿ ಎಂಬ ನಿಯಮದಡಿ ಭೂಮಿಯನ್ನು ಉಳುಮೆ ಮಾಡುವ ಬಡಜನರ ಭೂಮಿಯ ಹಕ್ಕನ್ನು ಎತ್ತಿ ಹಿಡಿದರು. ಗೇಣಿ ಕಾಯ್ದೆಯನ್ನು ಪರಿಚಯಿಸಿದರು. ಅವರ ದೂರದರ್ಶಿತ್ವದ ಫಲವಾಗಿ ಇನಾಮ್‌ ಕಾಯ್ದೆ ಸಹ ಅಸ್ತಿತ್ವಕ್ಕೆ ಬಂದವು. ರಾಜಕೀಯ, ಹೋರಾಟಗಳ ಹೊರತಾಗಿ ಉತ್ತಮ ಬರಹಗಾರರೂ ಆಗಿದ್ದ ಕಡಿದಾಳ್‌ ಮಂಜಪ್ಪ ಪಂಜರವಳ್ಳಿಯ ಪಂಜು (1963), ನಾಳೆಯ ನೆಳಲು (1966), ಕ್ರಾಂತಿಕೂಟ (1974) ಎಂಬ ಪ್ರಸಿದ್ಧ ಕಾದಂಬರಿಗಳನ್ನು ಬರೆದಿದ್ದಾರೆ. ನನಸಾಗದ ಕನಸು ಎಂಬುದು ಇವರ ಆತ್ಮಚರಿತ್ರೆ. ಮುಖ್ಯಮಂತ್ರಿಯಾಗಿ ಮಾಜಿಯಾದ ಬಳಿಕ ಜೀವನ ನಿರ್ವಹಣೆಗೆ ಹಳೆಯ ವಕೀಲಿ ವೃತ್ತಿ ಹಿಂತಿರುಗಿದ್ದು ಅವರ ಸ್ವಚ್ಛ ಪ್ರಾಮಾಣಿಕ ರಾಜಕಾರಣಕ್ಕೆ, ವೃತ್ತಿ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss