ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ದೇಶದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಖ್ಯಾತಿಯಾದ ‘ಬಾಹುಬಲಿ’, ಅಮೆರಿಕದ ‘ಬ್ಲೂಬರ್ಡ್-6’ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಜಾಗತಿಕ ವಾಣಿಜ್ಯ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಪ್ರಾಬಲ್ಯವನ್ನು ಮರುಸ್ಥಾಪಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಎರಡನೇ ಲಾಂಚ್ ಪ್ಯಾಡ್‌ನಿಂದ ಬೆಳಗ್ಗೆ 8:54ಕ್ಕೆ ಉಡಾವಣೆಗೊಂಡ 43.5 ಮೀಟರ್ ಎತ್ತರದ LVM3 ರಾಕೆಟ್, ಸುಮಾರು 6,500 ಕೆ.ಜಿ ತೂಕದ ಬೃಹತ್ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಿತು. ಕೇವಲ 15 ನಿಮಿಷಗಳ ಪ್ರಯಾಣದ ನಂತರ, ಉಪಗ್ರಹವು ಭೂಮಿಯಿಂದ 520 ಕಿ.ಮೀ ಎತ್ತರದಲ್ಲಿ ನಿಖರವಾಗಿ ಕಕ್ಷೆಯನ್ನು ಸೇರಿಕೊಂಡಿತು. ಇದು ಭಾರತದ ನೆಲದಿಂದ ಉಡಾವಣೆಗೊಂಡ ಅತ್ಯಂತ ಭಾರವಾದ ವಿದೇಶಿ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಉಡಾವಣೆಯು ತಂತ್ರಜ್ಞಾನ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಪ್ರಸ್ತುತ ಸ್ಟಾರ್‌ಲಿಂಕ್‌ನಂತಹ ಸಂಸ್ಥೆಗಳು ಆಂಟೇನಾಗಳ ಮೂಲಕ ಇಂಟರ್‌ನೆಟ್ ನೀಡುತ್ತಿದ್ದರೆ, ಅಮೆರಿಕದ ‘AST ಸ್ಪೇಸ್‌ಮೊಬೈಲ್’ ಕಂಪನಿಯ ಈ ‘ಬ್ಲೂಬರ್ಡ್-6’ ಉಪಗ್ರಹವು ನೇರವಾಗಿ ಸ್ಮಾರ್ಟ್‌ಫೋನ್‌ಗಳಿಗೆ 5G ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲಿದೆ. ವಿಶ್ವದ ಮೊದಲ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ನೆಟ್‌ವರ್ಕ್ ನಿರ್ಮಿಸುವ ಗುರಿಯನ್ನು ಇದು ಹೊಂದಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಮಾತನಾಡಿ, “LVM3-M6 ಅತ್ಯಂತ ನಿಖರವಾಗಿ ಕಾರ್ಯನಿರ್ವಹಿಸಿದ್ದು, ಇದು ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮತ್ತು ಅಮೆರಿಕದ ಕಂಪನಿಯ ನಡುವಿನ ಯಶಸ್ವಿ ಸಹಭಾಗಿತ್ವದ ಫಲ,” ಎಂದು ತಿಳಿಸಿದ್ದಾರೆ.
ಈ ಯೋಜನೆಯ ಭಾಗವಾಗಿ 2026ರ ವೇಳೆಗೆ ಇಂತಹ ಸುಮಾರು 45-60 ಉಪಗ್ರಹಗಳನ್ನು ಹಾರಿಸಲು ಉದ್ದೇಶಿಸಲಾಗಿದ್ದು, ಇಂಟರ್‌ನೆಟ್ ಜಗತ್ತಿನಲ್ಲಿ ಇದು ಕ್ರಾಂತಿಕಾರಿ ಬದಲಾವಣೆ ತರಲಿದೆ.

