ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ತೀವ್ರ ಇಂಧನ ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ರಾಷ್ಟ್ರ ಶ್ರೀಲಂಕಾಗೆ ಭಾರತ ನೆರವಿನ ಹಸ್ತ ಚಾಚಿದ್ದು, ದ್ವೀಪ ರಾಷ್ಟ್ರಕ್ಕೆ ಬರೋಬ್ಬರಿ 38 ಸಾವಿರ ಮೆಟ್ರಿಕ್ ಟನ್ ಇಂಧನವನ್ನು ಕಳುಹಿಸಿ ಕೊಟ್ಟಿದೆ.
ಯುದ್ಧ ಭೀಕರತೆ ನಡುವೆ ಇರಾನ್ ಹಾರ್ಮುಜ್ ಜಲಸಂಧಿ ಮೂಲಕ ತೈಲ ಹೊತ್ತ ಹಡಗುಗಳ ಸಂಚಾರ ನಡೆಸಲು ಭಾರತಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸಧ್ಯ ಇಂಧನ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ಶ್ರೀಲಂಕಾದಲ್ಲಿ ತೀವ್ರ ರೀತಿಯಲ್ಲಿ ಇಂಧನ ಬಿಕ್ಕಟ್ಟು ತಲೆದೊರಿರುವ ಹಿನ್ನಲೆಯಲ್ಲಿ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ, ಪ್ರಧಾನಿ ಮೋದಿ ಅವರಿಗೆ ಕರೆ ನೆರವು ಯಾಚಿಸಿದ್ದರು.
ಶ್ರೀಲಂಕಾ ಅಧ್ಯಕ್ಷರ ಕೋರಿಕೆಯ ಮೇರೆಗೆ ಮೋದಿ ಸರ್ಕಾರ, 38 ಸಾವಿರ ಮೆಟ್ರಿಕ್ ಟನ್ ಇಂಧನವನ್ನು ಕಳುಹಿಸಿಕೊಟ್ಟಿದೆ.
ಭಾರತದ ಸಕಾಲಿಕ ನೆರವಿಗೆ ಲಂಕಾ ಅಧ್ಯಕ್ಷ ದಿಸಾನಾಯಕೆ ಧನ್ಯವಾದ ತಿಳಿಸಿದ್ದು, ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಶ್ರೀಲಂಕಾ ಎದುರಿಸುತ್ತಿರುವ ಇಂಧನ ಪೂರೈಕೆಯಲ್ಲಿನ ಅಡಚಣೆಗಳ ಕುರಿತು ಪ್ರಧಾನಿ ಮೋದಿ ಅವರ ಜೊತೆ ಮಾತನಾಡಿದೆ. ಈ ವೇಳೆ ತ್ವರಿತ ಬೆಂಬಲ ನೀಡುವ ಮೂಲಕ ಕೊಲಂಬೊಗೆ 38 ಸಾವಿರ ಮೆಟ್ರಿಕ್ ಟನ್ ಇಂಧನ ಹೊತ್ತ ಹಡಗು ಆಗಮಿಸಿದೆ. ಇದಕ್ಕಾಗಿ ಕೃತಜ್ಞತೆ ಸಲ್ಲಿಸುವೆ. ಈ ಸಂದರ್ಭ ಪ್ರೋತ್ಸಾಹಿಸಿದ ವಿದೇಶಾಂಗ ಸಚಿವ ಜೈಶಂಕರ್ ಅವರಿಗೂ ನನ್ನ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.



