April 30, 2026
Thursday, April 30, 2026
spot_img

ಬೆಳಗಾವಿ ಕೃಷಿಕನ ಸಾಧನೆ, ಬೆಂಗಳೂರಿನ ಶೈಕ್ಷಣಿಕ ಉಪಕ್ರಮಕ್ಕೆ ‘ಮನ್ ಕಿ ಬಾತ್’ನಲ್ಲಿ ಉಘೇ ಎಂದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನ ‘ಮನ್ ಕಿ ಬಾತ್’ನಲ್ಲಿ ಕರ್ನಾಟಕದ ಪ್ರಮುಖ ಸಾಧನೆಗಳನ್ನು ಉಲ್ಲೇಖಿಸಿ ಶ್ಲಾಘಿಸಿದ್ದಾರೆ.


ಬೆಂಗಳೂರಿನ ‘ಪ್ರಯೋಗ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್’ ಸಂಸ್ಥೆಯ ಶೈಕ್ಷಣಿಕ ಉಪಕ್ರಮವನ್ನು ಮೆಚ್ಚಿಕೊಂಡ ಪ್ರಧಾನಿ, ‘ಅನ್ವೇಷಣ್’ ಪ್ರಯೋಗದ ಮೂಲಕ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ ಮತ್ತು ಭೂ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಸಂಶೋಧನೆ ನಡೆಸಲು ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.


ಇಂತಹ ಕಲಿಕೆಯು ಭವಿಷ್ಯದ ವಿಜ್ಞಾನಿಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕೃಷಿ ಕ್ಷೇತ್ರದಲ್ಲಿನ ಸಾಧನೆಯನ್ನು ಉಲ್ಲೇಖಿಸಿದ ಪ್ರಧಾನಿ, ಬೆಳಗಾವಿ ತಾಲೂಕಿನ ಬೋಡ ಕ್ಯಾನಟ್ಟಿ ಗ್ರಾಮದ ನಿವಾಸಿ ಶಿವಲಿಂಗ ಸಾತಪ್ಪ ಹುದ್ದಾರ್ ಅವರ ಯಶೋಗಾಥೆಯನ್ನು ಹಂಚಿಕೊಂಡರು. ಸಾಂಪ್ರದಾಯಿಕ ಕೃಷಿಯಿಂದ ಹೊರಬಂದು ಆಧುನಿಕ ಮೀನುಗಾರಿಕೆಯಲ್ಲಿ ಯಶಸ್ಸು ಕಂಡಿರುವ ಶಿವಲಿಂಗ ಅವರ ಪ್ರಯತ್ನ ಇತರ ರೈತರಿಗೆ ಸ್ಫೂರ್ತಿಯಾಗಿದೆ ಎಂದು ಬಣ್ಣಿಸಿದರು.


ಪ್ರಸ್ತುತ ಈ ಮೀನು ಕೃಷಿಯನ್ನು ನೋಡಿಕೊಳ್ಳುತ್ತಿರುವ ಅವರ ಪುತ್ರ ರಾಜುಶಿವಲಿಂಗಪ್ಪ ಹುದ್ದಾರ್, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಮೀನುಗಾರಿಕೆಯಲ್ಲಿ ಕಂಡ ಪ್ರಗತಿಯನ್ನು ವಿವರಿಸಿದರು. ಸಾರ್ವಜನಿಕ ಸಹಭಾಗಿತ್ವದಿಂದ ಮಾತ್ರ ದೇಶದಲ್ಲಿ ದೊಡ್ಡ ಬದಲಾವಣೆ ಸಾಧ್ಯ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಕರೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !