ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಮೈಲಿಗಲ್ಲೊಂದು ಸೃಷ್ಟಿಯಾಗಲಿದ್ದು, ದೇಶದ ಚೊಚ್ಚಲ ಹೈಸ್ಪೀಡ್ ಬುಲೆಟ್ ರೈಲು ಸೇವೆಗೆ ಮುಹೂರ್ತ ನಿಗದಿಯಾಗಿದೆ. ಬರುವ 2027ರ ಆಗಸ್ಟ್ 15ರಿಂದ ಸಾರ್ವಜನಿಕ ಸಂಚಾರ ಅಧಿಕೃತವಾಗಿ ಶುರುವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ಮೂಲಕ ಭಾರತವು ಜಗತ್ತಿನ ಪ್ರತಿಷ್ಠಿತ ಹೈಸ್ಪೀಡ್ ರೈಲು ಹೊಂದಿರುವ ದೇಶಗಳ ಸಾಲಿಗೆ ಸೇರಲಿದೆ.
ಮೊದಲ ಹಂತದ ಸಂಚಾರ ಎಲ್ಲಿಂದ ಎಲ್ಲಿಗೆ?
ಒಟ್ಟು 508 ಕಿಲೋಮೀಟರ್ ಉದ್ದದ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು (MAHSR) ಕಾರಿಡಾರ್‌ನಲ್ಲಿ, ಸುರಕ್ಷತೆಯ ಕಾರಣಗಳಿಂದಾಗಿ ಹಂತ ಹಂತವಾಗಿ ರೈಲು ಓಡಿಸಲು ನಿರ್ಧರಿಸಲಾಗಿದೆ. ಮೊದಲ ಭಾಗವಾಗಿ ಗುಜರಾತ್‌ನ ಸೂರತ್ ಮತ್ತು ಬಿಲಿಮೊರಾ ನಡುವಿನ ಮಾರ್ಗವು ಉದ್ಘಾಟನೆಗೊಳ್ಳಲಿದೆ. ಇದರ ಯಶಸ್ಸಿನ ಬಳಿಕ ವಾಪಿ-ಸೂರತ್, ವಾಪಿ-ಅಹಮದಾಬಾದ್, ಅಹಮದಾಬಾದ್-ಥಾಣೆ ಹಾಗೂ ಅಂತಿಮವಾಗಿ ಇಡೀ ಮುಂಬೈ-ಅಹಮದಾಬಾದ್ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಶೇ. 80ರಷ್ಟು ಕಾಮಗಾರಿ ಮುಕ್ತಾಯ
ಯೋಜನೆಯ ಪ್ರಗತಿಯ ಬಗ್ಗೆ ಮಾಹಿತಿ ಹಂಚಿಕೊಂಡ ಸಚಿವರು, ಈಗಾಗಲೇ ಒಟ್ಟು ಕಾಮಗಾರಿಯ ಶೇ. 80ರಷ್ಟು ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದಿದ್ದಾರೆ. ನಿಗದಿತ ಸಮಯಕ್ಕೆ ಗುರಿ ತಲುಪಲು ದಿನದ 24 ಗಂಟೆಯೂ ಕೆಲಸಗಳು ನಡೆಯುತ್ತಿವೆ. ಈ ಬೃಹತ್ ಯೋಜನೆ ಸಾಕಾರಗೊಂಡರೆ ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಇಳಿಕೆಯಾಗಲಿದ್ದು, ದೇಶದ ಆರ್ಥಿಕ ಪ್ರಗತಿ ಮತ್ತು ಪ್ರಾದೇಶಿಕ ವ್ಯವಹಾರಗಳಿಗೆ ಭಾರಿ ವೇಗ ಸಿಗಲಿದೆ.



