ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಕ್ಯಾಲೆಂಡರ್ ವರ್ಷದ ಮೊದಲ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 1.27 ಬಿಲಿಯನ್ ಡಾಲರ್ ಕುಸಿತಗೊಂಡು 561.583 ಬಿಲಿಯನ್ ಡಾಲರ್ ಗೆ ತಲುಪಿದೆ. ಜನೆವರಿ 6 ರಂದು ಅಂತ್ಯಗೊಂಡ ವಾರದಲ್ಲಿ ಭಾರತ ವಿದೇಶಿ ವಿನಿಮಯ ಸಂಗ್ರಹವು ಕುಸಿತ ದಾಖಲಿಸಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇತ್ತೀಚೆಗೆ ಬಿಡುಗಡೆಗೊಳಿಸಿದ ಅಮಕಿ ಅಂಶಗಳು ತೋರಿಸಿವೆ. ಎರಡು ವಾರಗಳ ಸತತ ಕುಸಿತದ ನಂತರ ಹಿಂದಿನ ವಾರವಷ್ಟೇ 44 ಮಿಲಿಯನ್ ಡಾಲರುಗಳಷ್ಟು ಏರಿಕೆ ದಾಖಲಾಗಿತ್ತು.
2021ರ ಅಕ್ಟೋಬರ್ ನಲ್ಲಿ ವಿದೇಶಿ ವಿನಿಮಯ ಸಂಗ್ರಹವು ಸಾರ್ವಕಾಳಿಕ ಗರಿಷ್ಟ ಮಟ್ಟ 645 ಬಿಲಿಯನ್ ಡಾಲರ್ ಗೆ ತಲುಪಿತ್ತು. ಜಾಗತಿಕ ಬೆಳವಣಿಗೆಗಳಿಂದ ಉಂಟಾದ ಒತ್ತಡಗಳ ನಡುವೆ ರೂಪಾಯಿಯನ್ನು ರಕ್ಷಿಸಲು ಕೇಂದ್ರೀಯ ಬ್ಯಾಂಕ್ ಡಾಲರುಗಳನ್ನು ಮಾರಾಟ ಮಾಡಿದ್ದರಿಂದ ಸಂಗ್ರಹವು ಕುಸಿತವನ್ನು ದಾಖಲಿಸಿದೆ. ಸೆಪ್ಟೆಂಬರ್‌ವರೆಗೆ ಆರ್‌ಬಿಐ ನಿವ್ವಳ 33.42 ಬಿಲಿಯನ್ ಡಾಲರ್‌ಗಳನ್ನು ಮಾರಾಟ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಈ ಹಿಂದೆ ಹೇಳಿದ್ದರು.
ಇದೇ ವಾರದಲ್ಲಿ ಚಿನ್ನದ ಸಂಗ್ರಹವು 461 ಮಿಲಿಯನ್ ಡಾಲರ್ ಏರಿಕೆಯಾಗಿ 41.784 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಆರ್ ಬಿ ಐ ಅಂಕಿಅಂಶಗಳು ತೋರಿಸಿವೆ.