ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದು, ಇದರ ನಡುವೆ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2025ರ ಅಕ್ಟೋಬರ್-ಡಿಸೆಂಬರ್ನಲ್ಲಿ ಅಂದರೆ ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆ ದರವು ಶೇ. 7.8ರಷ್ಟಾಗಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ ಶೇ. 6.2ರಷ್ಟಿತ್ತು.
2026ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರವು ಶೇ. 7.8ರಷ್ಟಿದ್ದು, ಈ ಹಿಂದೆ ಅಂದಾಜು ಮಾಡಿದ ಶೇ. 7.4ಕ್ಕಿಂತ ಹೆಚ್ಚಾಗಿದೆ.
2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 78.41 ಲಕ್ಷ ಕೋಟಿ ರೂ. ಗಳಷ್ಟಿತ್ತು. ಆದರೆ 2025-26ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನೈಜ ಜಿಡಿಪಿ ಅಥವಾ ಸ್ಥಿರ ಬೆಲೆಗಳಲ್ಲಿ ಜಿಡಿಪಿ 84.54 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ರಾಷ್ಟ್ರೀಯ ಅಂಕಿ-ಅಂಶ ಕಚೇರಿ ಇಂದು ಹೇಳಿಕೆಯಲ್ಲಿ ತಿಳಿಸಿದೆ.
2026ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯವು ಶೇ. 13.3ರಷ್ಟು ಅಚ್ಚರಿಯ ದರದಲ್ಲಿ ಬೆಳೆದಿದೆ. ಕೃಷಿ ವಲಯವು ಶೇ. 1.4ರಷ್ಟು ಬೆಳೆದಿದೆ. ವ್ಯಾಪಾರ, ಹೋಟೆಲ್‌ಗಳು, ಸಾರಿಗೆ, ಸಂವಹನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಸೇವೆಗಳು ಶೇ. 11ರಷ್ಟು ಬೆಳೆದಿವೆ.
2025-26ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರ ಉಪಯುಕ್ತ ಸೇವೆಗಳ ವಲಯ (1.5%) ಮಧ್ಯಮ ನೈಜ ಬೆಳವಣಿಗೆಯ ದರವನ್ನು ಕಂಡಿದೆ.
2026ರ ಜನವರಿವರೆಗಿನ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಆದಾಯ 27.1 ಲಕ್ಷ ಕೋಟಿ ರೂ.. ಭಾರತದ ಹಣಕಾಸಿನ ಕೊರತೆ 9.81 ಲಕ್ಷ ಕೋಟಿ ರೂ., ಭಾರತದ ಒಟ್ಟು ಖರ್ಚು 36.9 ಲಕ್ಷ ಕೋಟಿ ರೂ ಎಂದು ತಿಳಿಸಿದೆ.



