2022-23ರಲ್ಲಿ ಭಾರತದ ಜಿಡಿಪಿ 7.2%ಕ್ಕೆ ಏರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಜಿಡಿಪಿ ಬೆಳವಣಿಗೆ ಕಳೆದ 2022-23ರಲ್ಲಿ ನಿರೀಕ್ಷೆ ಮೀರಿ 7. 2 %ಕ್ಕೆ ಏರಿಕೆಯಾಗಿದೆ.
ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ 6.1%ಕ್ಕೆ ವೃದ್ಧಿಸಿದೆ. 2022-23ರ ಸಾಲಿನಲ್ಲಿ ವಿತ್ತೀಯ ಕೊರತೆ ಜಿಡಿಪಿಯ 6.4%ರಷ್ಟಿದ್ದು, ಸರ್ಕಾರದ ವಿತ್ತೀಯ ನಿಯಂತ್ರಣ ಗುರಿಯ ಒಳಗೆಯೇ ಇದೆ. ವಿತ್ತೀಯ ಕೊರತೆ 1.34 ಲಕ್ಷ ಕೋಟಿ ರೂ.ಗಳಷ್ಟಿತ್ತು.

2021-22ರ ಸಾಲಿಗೆ ಹೋಲಿಸಿದರೆ ವಿತ್ತೀಯ ಕೊರತೆಯ ನಿಯಂತ್ರಣದಲ್ಲಿ ಸುಧಾರಣೆಯಾಗಿದೆ. ವಿತ್ತೀಯ ಕೊರತೆ 6.7% ಇತ್ತು. ಈಗ 6.4%ಕ್ಕೆ ಇಳಿಕೆಯಾಗಿದೆ. ವಿತ್ತೀಯ ಕೊರತೆಯನ್ನು 2025-26ರ ವೇಳೆಗೆ ಜಿಡಿಪಿಯ 4.5% ಒಳಗೆ ನಿಯಂತ್ರಿಸುವ ಗುರಿಯನ್ನು ಸರ್ಕಾರ ಹೊಂದಿದೆ.

2023-24ರಲ್ಲಿ 5.9%ಕ್ಕೆ ತಗ್ಗಿಸುವ ಉದ್ದೇಶ ಹೊಂದಿದೆ. ವಿತ್ತೀಯ ಕೊರತೆಯನ್ನು ಭರಿಸಲು ಸರ್ಕಾರ ಹಣಕಾಸು ಮಾರುಕಟ್ಟೆಯಿಂದ ಸಾಲ ಮಾಡಿದೆ. ಜಿಡಿಪಿ ಬೆಳವಣಿಗೆಯು 2020-21ರಲ್ಲಿ 8.7%, 2021-22ರಲ್ಲಿ 9.1% ಏರಿಕೆಯಾಗಿತ್ತು.

2023ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಕೃಷಿ ವಲಯದಲ್ಲಿ ಶೇ. 10.3ರಷ್ಟು ವೃದ್ಧಿಯಾಗಿದ್ದು, ಅದೇ ರೀತಿ ಗಣಿಗಾರಿಕೆ ವಲಯದಲ್ಲಿ ಶೇ. 16.3ರಷ್ಟು ವೃದ್ಧಿ ಮತ್ತು ನಿರ್ಮಾಣ ವಲಯದಲ್ಲಿ ಶೇ. 10.4ರಷ್ಟು ವೃದ್ಧಿಯಾಗಿದೆ.

ವಿಶ್ವ ಬ್ಯಾಂಕ್‌ (world Bank) 2023-24ರ ಸಾಲಿಗೆ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು 6.6% ರಿಂದ 6.4%ಕ್ಕೆ ಇಳಿಸಿತ್ತು. ಹಣದುಬ್ಬರವನ್ನು ತಗ್ಗಿಸುವ ಸಲುವಾಗಿ ಆರ್‌ಬಿಐ ಕಳೆದ ಮೇಯಿಂದ ಬಡ್ಡಿ ದರದಲ್ಲಿ 2.50% ಏರಿಸಿದೆ. ಇದರ ಪರಿಣಾಮ ಸಾಲದ ಬಡ್ಡಿ ದರಗಳು ಏರಿಕೆಯಾಗಿದೆ. ಇದು ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು ಎಂದು ವಿಶ್ವಬ್ಯಾಂಕ್‌ ಅಭಿಪ್ರಾಯಪಟ್ಟಿತ್ತು. ಜನವರಿ-ಮಾರ್ಚ್‌ ಅವಧಿಯಲ್ಲಿ ಸೇವಾ ವಲಯ 6.3% ಪ್ರಗತಿ ದಾಖಲಿಸಿತ್ತು.

2022-23ರಲ್ಲಿ 6.9% ಜಿಡಿಪಿ ಬೆಳವಣಿಗೆಯನ್ನು ವರ್ಲ್ಡ್‌ ಬ್ಯಾಂಕ್‌ ಅಂದಾಜಿಸಿತ್ತು. ಪ್ರಸಕ್ತ ಸಾಲಿನಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ 2.1%ಕ್ಕೆ ಇಳಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಸಂಭವಿಸಿರುವ ಬ್ಯಾಂಕಿಂಗ್‌ ಬಿಕ್ಕಟ್ಟು ಭಾರತದ ಮೇಲೆ ಸೀಮಿತ ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು. ಆದರೆ ಭಾರತದ ಬ್ಯಾಂಕಿಂಗ್‌ ವಲಯ ಸುಭದ್ರವಾಗಿದೆ ಎಂದು ವಿಶ್ವಬ್ಯಾಂಕ್‌ ವಿವರಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!