‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಅಶ್ಲೀಲ ಹೇಳಿಕೆ ವಿವಾದ: ರಣವೀರ್ ಅಲ್ಲಾಬಾಡಿಯಾ ವಿರುದ್ಧ ಮಹಿಳಾ ಆಯೋಗ ಸಮನ್ಸ್ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಯೂಟ್ಯೂಬ್ ಶೋ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಕಾರ್ಯಕ್ರಮದ ಮೊದಲ ಸಂಚಿಕೆಯಿಂದ 6ನೇ ಸಂಚಿಕೆಯವರೆಗೆ ಭಾಗಿಯಾಗಿದ್ದ 30ರಿಂದ 40 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ನಡುವೆ ಈ ಶೋನಲ್ಲಿ ಪಾಲ್ಗೊಂಡು ಅಶ್ಲೀಲ ಹೇಳಿಕೆ ನೀಡಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಹಾಗೂ ಸಮಯ್ ರೈನಾ ವಿರುದ್ಧ ಮಹಿಳಾ ಆಯೋಗ ಕೂಡ ಸಮನ್ಸ್ ಜಾರಿಗೊಳಿಸಿದೆ.

ಸೈಬರ್ ಇಲಾಖೆಯು ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಮತ್ತು ಹಾಸ್ಯ ಕಾರ್ಯಕ್ರಮದ ಎಲ್ಲಾ ಸಂಚಿಕೆಗಳನ್ನು ಅಂದರೆ ಒಟ್ಟು 18 ಸಂಚಿಕೆಗಳನ್ನು ತೆಗೆದುಹಾಕಲು ಕೋರಿದೆ. ಸೈಬರ್ ಇಲಾಖೆಯು ನಡೆಸಿದ ತನಿಖೆಯ ಸಮಯದಲ್ಲಿ ಈ ಶೋನಲ್ಲಿ ಭಾಗವಹಿಸುವವರು ಮತ್ತು ಅತಿಥಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಇತರರು “ಅಶ್ಲೀಲ” ಭಾಷೆಯನ್ನು ಬಳಸುತ್ತಿರುವುದು ಕಂಡುಬಂದಿದೆ. ಈ ಕಾರ್ಯಕ್ರಮದ ತೀರ್ಪುಗಾರರು ಮತ್ತು ಅತಿಥಿಗಳು ಸೇರಿದಂತೆ ಅಂತಹ ಜನರನ್ನು ಪಟ್ಟಿ ಮಾಡಲಾಗಿದೆ.

ಹಾಸ್ಯನಟ ಸಮಯ್ ರೈನಾ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ನೀಡಿದ ಹೇಳಿಕೆಗಳು ಆಕ್ರಮಣಕಾರಿ ಮತ್ತು ಅವಹೇಳನಕಾರಿ ಎಂದು ಪರಿಗಣಿಸಲ್ಪಟ್ಟ ನಂತರ ವಿವಾದ ಭುಗಿಲೆದ್ದಿತು.

ರಾಷ್ಟ್ರೀಯ ಮಹಿಳಾ ಆಯೋಗ (NCW) ಯೂಟ್ಯೂಬರ್​ಗಳಾದ ರಣವೀರ್ ಅಲ್ಲಾಬಾಡಿಯಾ, ಸಮಯ್ ರೈನಾ, ಅಪೂರ್ವ ಮುಖಿಜಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಕಾರ್ಯಕ್ರಮದ ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿದೆ. ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿರುವ ಹೇಳಿಕೆ ಎಲ್ಲರಿಗೂ ಮುಜುಗರ ತರುವಂತಿದೆ. ಇದು ಸಮಾನತೆ ಮತ್ತು ಪರಸ್ಪರ ಗೌರವವನ್ನು ಎತ್ತಿಹಿಡಿಯುವ ಸಮಾಜದಲ್ಲಿ ಘನತೆ ಮತ್ತು ಗೌರವವನ್ನು ಉಲ್ಲಂಘಿಸುತ್ತವೆ ಎಂದು ಮಹಿಳಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಹಿಳಾ ಸಂಸ್ಥೆಯು ಆಯೋಗದ ಮುಂದೆ ಅವರಿಗೆ ಖುದ್ದಾಗಿ ಹಾಜರಾಗಲು ಕೇಳಿಕೊಂಡಿದೆ. ಈ ವಿಚಾರಣೆಯು ಫೆಬ್ರವರಿ 17ರಂದು ಮಧ್ಯಾಹ್ನ 12 ಗಂಟೆಗೆ ದೆಹಲಿಯ ಮಹಿಳಾ ಆಯೋಗದ ಕಚೇರಿಯಲ್ಲಿ ನಡೆಯಲಿದೆ.

ಏನಿದು ವಿವಾದ?:
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಣವೀರ್ ಅಲ್ಲಾಬಾಡಿಯಾ ಆ ಶೋನಲ್ಲಿ ಭಾಗವಹಿಸಿದ್ದ ಯುವಕನೊಬ್ಬನ ಬಳಿ ಆತನ ತಂದೆ-ತಾಯಿಯ ಬಗ್ಗೆ ಮುಜುಗರಕಾರಿಯಾಗಿ ಮಾತನಾಡಿದ್ದರು. ಇದನ್ನು ಕೇಳಿದ ಇತರೆ ತೀರ್ಪುಗಾರರು ಚಪ್ಪಾಳೆ ತಟ್ಟಿ ನಕ್ಕಿದ್ದರು.

ಆದರೆ, ಈ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಮಾಜದಲ್ಲಿ ಗೌರವದಿಂದ ಬದುಕುತ್ತಿರುವವರು ಇಂತಹ ಶೋ ನೋಡಲು ಸಾಧ್ಯವಿಲ್ಲ. ಇದು ತೀವ್ರ ಅವಹೇಳನಕಾರಿ ಮತ್ತು ಅಗೌರವದ ಹೇಳಿಕೆಯಾಗಿದೆ ಎಂದು ಆಕ್ರೋಶ, ಟ್ರೋಲ್ ವ್ಯಕ್ತವಾಗಿತ್ತು. ಈಗಾಗಲೇ ಈ ವಿವಾದಾತ್ಮಕ ಸಂಚಿಕೆಯನ್ನು ಯೂಟ್ಯೂಬ್​ನಿಂದ ತೆಗೆದುಹಾಕಲಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!