ದ್ವೀಪ ರಾಷ್ಟ್ರಕ್ಕೆ ಭಾರತದ ನೆರವಿನ ಹಸ್ತ: ಕೇಂದ್ರ ಸರಕಾರಕ್ಕೆ ಧನ್ಯವಾದ ಹೇಳಿದ ಮಾಲ್ಡೀವ್ಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೆ (Maldives) ಭಾರತ (India) ಅಗತ್ಯ ವಸ್ತುಗಳನ್ನು ಪೂರೈಸಲು ಒಪ್ಪಿಕೊಂಡಿದೆ.

ಇದರ ಭಾಗವಾಗಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಡಿಯಲ್ಲಿ 2024-2025 ರ ಅವಧಿಯಲ್ಲಿ ಸರ್ಕಾರವು ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಅಕ್ಕಿ, ಗೋಧಿ, ಹಿಟ್ಟು, ಸಕ್ಕರೆ, ಧಾನ್ಯ, ನದಿ ಮರಳನ್ನು ಒಳಗೊಂಡಂತೆ ಕೆಲವು ಪ್ರಮಾಣದ ಅಗತ್ಯ ವಸ್ತುಗಳನ್ನು ಮಾಲ್ಡೀವ್ಸ್‌ಗೆ ರಫ್ತು (Export) ಮಾಡಲು ಒಪ್ಪಿಗೆ ನೀಡಿದೆ.

ಈ ವಸ್ತುಗಳ ರಫ್ತು 2024-25 ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಅಥವಾ ಭವಿಷ್ಯದ ಯಾವುದೇ ನಿರ್ಬಂಧ/ನಿಷೇಧದಿಂದ ವಿನಾಯಿತಿ ಪಡೆಯುತ್ತದೆ. ಅನುಮತಿಸಲಾದ ನಿರ್ದಿಷ್ಟ ಪ್ರಮಾಣದಲ್ಲಿ ಭಾರತ ಆಲೂಗಡ್ಡೆ (21,513.08 ಟನ್), ಈರುಳ್ಳಿ (35,749.13 ಟನ್), ಅಕ್ಕಿ (1,24,218.36 ಟನ್), ಗೋಧಿ ಹಿಟ್ಟು (1,09,162.96 ಟನ್), ಸಕ್ಕರೆ (64,494.33 ಟನ್), ನದಿ ಮರಳು (ಒಂದು ಮಿಲಿಯನ್ ಟನ್) ರಫ್ತು ಮಾಡಲಿದೆ.

ಭಾರತಕ್ಕೆ ಧನ್ಯವಾದ
ಇತ್ತ ಭಾರತದ ನೆರವಿನ ಹಸ್ತಕ್ಕೆ ಮಾಲ್ಡೀವ್ಸ್‌ ಧನ್ಯವಾದ ಹೇಳಿದೆ. ಭಾರತದಿಂದ ಅಗತ್ಯ ಸರಕುಗಳನ್ನು ಆಮದು ಮಾಡಿಕೊಳ್ಳಲು ಒಪ್ಪಂದವನ್ನು ನವೀಕರಣಗೊಳಿಸಿದ್ದಕ್ಕೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು. ಇದು ನಿಜವಾಗಿಯೂ ದೀರ್ಘಕಾಲದ ಸ್ನೇಹವನ್ನು ಸೂಚಿಸುತ್ತದೆ.ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ವಾಣಿಜ್ಯವನ್ನು ಮತ್ತಷ್ಟು ವಿಸ್ತರಿಸುವ ಬಲವಾದ ಬದ್ಧತೆಯನ್ನು ಇದು ಸೂಚಿಸುತ್ತದೆ ಎಂದು ಮಾಲ್ಡೀವ್ಸ್‌ ವಿದೇಶಾಂಗ ಸಚಿವ ಮೂಸಾ ಜಮೀರ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಪೋಸ್ಟ್‌ಗೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ( S Jaishankar) ಪ್ರತಿಕ್ರಿಯಿಸಿ, ನಿಮಗೆ ಸ್ವಾಗತ. ಭಾರತ ತನ್ನ ನೆರೆ ರಾಷ್ಟ್ರಗಳಿಗೆ ಮೊದಲ ಆದ್ಯತೆ ನೀಡುತ್ತದೆ. ಸಾಗರ ನೀತಿಗಳಿಗೆ ದೃಢವಾಗಿ ಬದ್ಧವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!