ಹೊಸದಿಗಂತ ಡಿಜಿಟಲ್ ಡೆಸ್ಕ್:
AIFF ಮೇಲಿನ ನಿಷೇಧವನ್ನ ತೆಗೆದುಹಾಕಿದ ಬಳಿಕ ಭಾರತವು ಅಂಡರ್-17 ವಿಶ್ವಕಪ್ ಆಯೋಜಿಸಲು ಸಿದ್ಧವಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಈ ಪಂದ್ಯಾವಳಿಯನ್ನ ಆಯೋಜಿಸಲು ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ. ಫಿಫಾ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದು ಇದು ಎರಡನೇ ಬಾರಿ. ಭಾರತ ಈ ಹಿಂದೆ 2017ರಲ್ಲಿ 17 ವರ್ಷದೊಳಗಿನವರ ಪುರುಷರ ವಿಶ್ವಕಪ್ ಆಯೋಜಿಸಿತ್ತು.
17 ವರ್ಷದೊಳಗಿನವರ ವಿಶ್ವಕಪ್ ಆಯೋಜನೆಗೆ ಗ್ಯಾರಂಟಿ ಸಹಿ ಹಾಕಲಾಗಿದೆ ಎಂದು ಕ್ರೀಡಾ ಸಚಿವರು ತಿಳಿಸಿದ್ದಾರೆ. 2017ರಲ್ಲಿ ಪುರುಷರ ಫಿಫಾ U-17 ವಿಶ್ವಕಪ್‌ನಂತೆಯೇ ಇದನ್ನ ಆಯೋಜಿಸಲಾಗುವುದು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 2300 ಕೋಟಿ ಬಜೆಟ್ ನೀಡಿದ್ದಾರೆ.
ಅಕ್ಟೋಬರ್ 11 ರಿಂದ 30 ರವರೆಗೆ ದೇಶದ ಮೂರು ನಗರಗಳಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು, ಒಟ್ಟು 32 ಪಂದ್ಯಗಳು ಇದರಲ್ಲಿ ನಡೆಯಲಿವೆ. ನವಿ ಮುಂಬೈ, ಗೋವಾ ಮತ್ತು ಭುವನೇಶ್ವರ್ ಈ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಇದರಿಂದ ಫುಟ್‌ಬಾಲ್‌ನಲ್ಲಿ ಆಸಕ್ತಿ ಹೊಂದಿರುವ ಮಹಿಳಾ ಆಟಗಾರರಿಗೆ ಉತ್ತೇಜನ ಸಿಗುತ್ತದೆ. ಇದರೊಂದಿಗೆ ಫುಟ್ಬಾಲ್ ಆಟವು ದೇಶದಾದ್ಯಂತ ಹೆಚ್ಚು ಜನಪ್ರಿಯತೆಯನ್ನ ಪಡೆಯುತ್ತದೆ. ಇದಲ್ಲದೇ ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಪೂರ್ತಿ ದೊರೆಯಲಿದ್ದು, ದೇಶದ ಹೆಣ್ಣುಮಕ್ಕಳು ಸತತವಾಗಿ ಉತ್ತಮ ಕ್ರೀಡೆಯನ್ನ ತೋರಿಸುತ್ತಿರುವುದನ್ನ ನಾವು ನೋಡಿದ್ದೇವೆ ಎಂದರು.
ಆತಿಥೇಯ ಭಾರತವು ಫುಟ್‌ಬಾಲ್ ‘ಪವರ್‌ಹೌಸ್’ ಬ್ರೆಜಿಲ್, ಮೊರಾಕ್ಕೊ ಮತ್ತು ಯುಎಸ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಕಠಿಣ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಿ ಗುಂಪಿನಲ್ಲಿ ಜರ್ಮನಿ, ನೈಜೀರಿಯಾ, ಚಿಲಿ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಹಾಲಿ ಚಾಂಪಿಯನ್ ಸ್ಪೇನ್ ಸಿ ಗುಂಪಿನಲ್ಲಿ ಕೊಲಂಬಿಯಾ, ಚೀನಾ ಮತ್ತು ಮೆಕ್ಸಿಕೊದೊಂದಿಗೆ ಸ್ಥಾನ ಪಡೆದಿದೆ. ಜಪಾನ್, ತಾಂಜಾನಿಯಾ, ಕೆನಡಾ ಮತ್ತು ಫ್ರಾನ್ಸ್ ತಂಡಗಳು ಡಿ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಅಕ್ಟೋಬರ್ 11ರಂದು (ಮಂಗಳವಾರ) ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಭಾರತ ತಂಡ ಅಮೆರಿಕ ವಿರುದ್ಧ ಅಭಿಯಾನ ಆರಂಭಿಸಲಿದೆ. ಮೊರಾಕೊ ವಿರುದ್ಧ ಎರಡನೇ ಪಂದ್ಯ ಅಕ್ಟೋಬರ್ 14 (ಶುಕ್ರವಾರ) ಅಲ್ಲಿ ನಡೆಯಲಿದೆ. ಆತಿಥೇಯ ತಂಡದ ಗುಂಪಿನ ಸುತ್ತಿನ ಪಂದ್ಯ ಬ್ರೆಜಿಲ್ ವಿರುದ್ಧ ಅಕ್ಟೋಬರ್ 17 (ಸೋಮವಾರ) ನಡೆಯಲಿದೆ.