ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪದಕದ ಬೇಟೆ ಅಂತ್ಯವಾಗಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳೊಂದಿಗೆ ಒಟ್ಟು 7 ಮೆಡಲ್ ಗೆದ್ದಿದ್ದ ಭಾರತ ಈ ಬಾರಿ ಕೇವಲ 6 ಪದಕಗಳನ್ನು ಗೆದ್ದಿವೆ.
ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತದ 117 ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ ಪದಕಗಳನ್ನು ಗೆದ್ದಿರುವುದು ಕೇವಲ ಐವರು ಮಾತ್ರ . ಅಂದರೆ ಮನು ಭಾಕರ್ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದು ಯಂಗ್ ಶೂಟರ್ ಮನು ಭಾಕರ್. ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ನಲ್ಲಿ ಕಂಚಿನ ಪದಕಕ್ಕೆ ಕೊರೊಳೊಡ್ಡುವ ಮೂಲಕ ಮನು ಭಾರತದ ಪದಕದ ಖಾತೆ ತೆರೆದಿದ್ದರು.
ಆ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮನು ಭಾಕರ್ ಭಾರತಕ್ಕೆ 2ನೇ ಕಂಚಿನ ಪದಕ ತಂದುಕೊಟ್ಟರು.
ಭಾರತಕ್ಕೆ ಮೂರನೇ ಪದಕ ಒಲಿದು ಬಂದಿದ್ದು ಕೂಡ ಶೂಟಿಂಗ್ನಲ್ಲೇ ಎಂಬುದು ವಿಶೇಷ. 50 ಮೀ ರೈಫಲ್ ಶೂಟಿಂಗ್ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಸ್ವಪ್ನಿಲ್ ಕುಸಾಲೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ನಾಲ್ಕನೇ ಪದಕ ಮೂಡಿಬಂದಿರುವುದು ಪುರುಷರ ಹಾಕಿ ಆಟದಿಂದ.ಭಾರತೀಯ ಹಾಕಿ ತಂಡ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಇದಾದ ಬಳಿಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಬಾರಿ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಭಾರತಕ್ಕೆ ಆರನೇ ಪದಕ ಗೆದ್ದುಕೊಡುವಲ್ಲಿ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಯಶಸ್ವಿಯಾದರು. ಪುರುಷರ ಕುಸ್ತಿ ಫ್ರೀಸ್ಟೈಲ್ 57 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ 21 ವರ್ಷದ ಅಮನ್ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದರು.