ಹೊಸದಿಗಂತ ವರದಿ ಹುಬ್ಬಳ್ಳಿ:
ಮಂಟೂರ ರಸ್ತೆಯಲ್ಲಿರುವ ಶ್ರೀ ಸತ್ಯ ಹರಿಶ್ಚಂದ್ರ ಸ್ಮಶಾನದಲ್ಲಿ ಅನಧಿಕೃತವಾಗಿ ಇಂದಿರಾ ಕ್ಯಾಂಟೀನ್ ನಿರ್ಮಿಸಿರುವುದನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.
ಸೋಮವಾರ ಇಲ್ಲಿಯ ಮಂಟೂರ ರಸ್ತೆ ಶ್ರೀ ಸತ್ಯ ಹರಿಶ್ಚಂದ್ರ ಸ್ಮಶಾನಕ್ಕೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹಾಗೂ ಕಾರ್ಯಕರ್ತರು ಭೇಟಿ ನೀಡಿ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿರುವುದನ್ನು ವಿರೋಧಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿರುವುದು ಖಂಡನೀಯ. ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರದ ದರ್ಪದಿಂದ ಈ ರೀತಿ ಮಾಡಿದ್ದಾರೆ. ಸರ್ಕಾರ ಇದೇ ಎಂಬ ಕಾರಣಕ್ಕೆ ಏನಾದರೂ ಮಾಡಬಹುದು ಎಂಬುವುದು ಸರಿಯಲ್ಲ ಎಂದು ಹರಿಹಾಯ್ದರು.
ಇಂದಿರಾ ಕ್ಯಾಂಟೀನ್ ಹೇಗೆ ಕಟ್ಟಲಾಗಿದೆ ಅದೇ ರೀತಿ ತೆರವು ಗೊಳಿಸಬೇಕು. ಅಷ್ಟು ಮೀರಿ ಕ್ಯಾಂಟೀನ್ ನಿರ್ಮಿಸುವುದಾರೆ ಮುಸ್ಲಿಮರ ಖಬರಸ್ಥಾನದಲ್ಲಿ ಕಟ್ಟಲಿ. ಹಿಂದೂಗಳ ಸ್ಮಶಾನ ಯಾಕೇ ಬೇಕು ಎಂದು ಪ್ರಶ್ನಿಸಿದರು.
ಹರಿಶ್ಚಚಂದ್ರ ಸನ್ಮಾದ ೧೦ ಎಕರೆ ಜಾಗದಲ್ಲಿ ೨ ಎಕರೆ ಈಗಾಗಲೇ ರಸ್ತೆ ನಿರ್ಮಿಸಲು ಅತೀಕ್ರಮಣ ಮಾಡಲಾಗಿದೆ. ಈಗ ಇಂದಿರಾ ಕ್ಯಾಂಟೀನ್ ನೆಪದಲ್ಲಿ ಸ್ಮಶಾನದ ಗೋಡೆ ಒಡೆದು ಏಕಾಏಕಿ ಕ್ಯಾಂಟೀನ್ ಗೆ ಕಟ್ಟಡ ನಿರ್ಮಿಸಲಾಗಿದೆ. ತಕ್ಷಣ ಕ್ಯಾಂಟೀನ್ ಕಟ್ಟಡ ತೆರವುಗೊಳಿಸದಿದ್ದರೆ ನಾವೇ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಪ್ರಸಾದ ಅಬ್ಬಯ್ಯ ಅವರು ಕೇವಲ ಮುಸ್ಲಿಮರ ಮತಗಳ ಪಡೆದು ಗೆದ್ದಿಲ್ಲ. ಹಿಂದೂಗಳಾದ ದಲಿತರು ನಿಮಗೆ ಮತ ಹಾಕಿದ್ದಾರೆ. ಅದನ್ನು ನೆನಪಿಟ್ಟುಕೊಳ್ಳಿ. ಇಂದಿರಾ ಕ್ಯಾಂಟೀನ್ ಊಟ ಮಾಡುವ ಸ್ಥಳ. ಸ್ಮಶಾನದಲ್ಲಿ ಯಾರು ಊಟಕ್ಕೆ ಬರುತ್ತಾರೆ? ಇಲ್ಲಿ ತಿಥಿ ಮಾಡಲು ಬರುತ್ತಾರೆ. ಯಾರು ಹೆಣಗಳ ಮೇಲೆ ಊಟ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಶ್ರೀರಾಮ ಸೇನೆಯ ಮುಖಂಡರಾದ ಗಂಗಾಧರ ಕುಲಕರ್ಣಿ ಅಣ್ಣಪ್ಪ ದೇವಟಗಿ, ಪ್ರವೀಣ ಮಾಳದಕರ, ಮಂಜುನಾಥ ಕಾಟಕರ, ಬಸ್ಸು, ಗುಣಧರ ದಡೋತಿ ಇದ್ದರು.