ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಟ್ಟಡವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 32 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ನಡೆದಿದೆ. ಧಾರಾವಿ ಕೊಳೆಗೇರಿ ಪ್ರದೇಶದಲ್ಲಿ ಏಳು ಅಂತಸ್ತಿನ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಒಂದು ತಿಂಗಳ ಮಗು ಸೇರಿದಂತೆ 32 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೆಂಟ್ರಲ್ ಮುಂಬೈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೃಹಾನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.
90 ಅಡಿ ರಸ್ತೆಯಲ್ಲಿರುವ ಶಾಮಾ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 80 ಜನರನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ. ಈ ಬೆಂಕಿಯಲ್ಲಿ ಇಡೀ ಕಟ್ಟಡ ಸುಟ್ಟು ಬೂದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡದ ನೆಲ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡು ಈ ಬೆಂಕಿಯಲ್ಲಿ ಏಳನೇ ಮಹಡಿಯಲ್ಲಿದ್ದ ಸ್ರ್ಕಾಪ್ ವಸ್ತು ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಅಧಿಕಾರಿಗಳು ವಾಹನಗಳೊಂದಿಗೆ ಬಂದು ಬೆಂಕಿ ನಂದಿಸಿದ್ದಾರೆ.
ಒಂದು ತಿಂಗಳ ಮಗು ಸೇರಿದಂತೆ ಎಲ್ಲಾ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇಬ್ಬರು ಹಿರಿಯ ನಾಗರಿಕರನ್ನು ಸಿಯೋನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನುಳಿದವರನ್ನು ಆಯುಷ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ಇಲಾಖೆ, ಪೊಲೀಸರು ಮತ್ತು ಮುಂಬೈ ಮುನ್ಸಿಪಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.