ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ರಭಾವಿ ರಣವೀರ್ ಅಲ್ಲಾಬಾದಿಯಾ ಕಾರ್ಯಕ್ರಮವೊಂದರಲ್ಲಿ ನೀಡಿದ್ದ ವಿವಾದಾತ್ಮಕ ಮತ್ತು ಕೀಳುಮಟ್ಟದ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ. ‘ಈ ರೀತಿಯ ಹೇಳಿಕೆ ನೀಡಬಾರದಿತ್ತು. ಇದು ಹಾಸ್ಯಕ್ಕೂ ಮೀರಿದ್ದು, ತಪ್ಪಾಯ್ತು’ ಎಂದು ಹೇಳಿದ್ದಾರೆ.
ಸ್ಟಾಂಡಪ್ ಕಮಿಡಿಯನ್ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಣವೀರ್ ಅಲ್ಲಾಬಾದಿಯಾ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಸ್ಪರ್ಧಿಯೊಬ್ಬರಲ್ಲಿ ಅಸಹ್ಯಕರ ಪ್ರಶ್ನೆ ಕೇಳಿದ್ದರು. ಈ ವಿಡಿಯೋ ವೈರಲ್ ಆಗಿ, ತೀವ್ರ ಟೀಕೆಗೆ ಗುರಿಯಾಗಿದೆ.
ಇದರ ಬೆನ್ನಲ್ಲೇ, ರಣವೀರ್ ತಮ್ಮ ತಪ್ಪನ್ನು ಅರಿತುಕೊಂಡು ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಬೀರ್‌ಬೈಸೆಪ್ಸ್ ಯೂಟ್ಯೂಬರ್,’ನನ್ನ ಹೇಳಿಕೆ ಉಚಿತವಾಗಿರಲಿಲ್ಲ. ಅದು ತಮಾಷೆಯೂ ಅಲ್ಲ ಎಂಬುದು ಗೊತ್ತಿದೆ. ಹಾಸ್ಯ ಮಾಡಲು ನನಗೆ ಬರುವುದಿಲ್ಲ. ನನ್ನ ಹೇಳಿಕೆಗೆ ಕ್ಷಮೆ ಕೋರುತ್ತೇನೆ’ ಎಂದಿದ್ದಾರೆ.
‘ವೇದಿಕೆಯನ್ನು ನೀವು ಹೀಗೆಯೇ ಬಳಸುತ್ತೀರಾ ಎಂದು ಹಲವರು ಪ್ರಶ್ನಿಸಿದ್ದೀರಿ. ಖಂಡಿತವಾಗಿಯೂ ನಾನು ಮಾಡಿದ್ದು ತಪ್ಪು. ವೇದಿಕೆಯಲ್ಲಿ ಈ ರೀತಿ ಮಾತನಾಡಬಾರದು. ನಾನು ಹೇಳಿದ್ದಕ್ಕೆ ನೆವ, ಸಂದರ್ಭ, ಸಮರ್ಥನೆಯನ್ನು ನೀಡುವುದಿಲ್ಲ. ನನ್ನಿಂದಾದ ಪ್ರಮಾದಕ್ಕೆ ಕ್ಷಮೆ ಮಾತ್ರ ಕೇಳುತ್ತೇನೆ’ ಎಂದು ಹೇಳಿದ್ದಾರೆ.
‘ಪಾಡ್‌ಕ್ಯಾಸ್ಟ್ ಅನ್ನು ಎಲ್ಲಾ ವಯೋಮಾನದ ಜನರು ವೀಕ್ಷಿಸುತ್ತಾರೆ. ಕುಟುಂಬವನ್ನು ನಾನು ಅತಿಯಾಗಿ ಗೌರವಿಸುತ್ತೇನೆ. ಈ ತಪ್ಪಿನಿಂದ ನಾನು ಪಾಠ ಕಲಿತಿದ್ದೇನೆ. ಆಕ್ಷೇಪಾರ್ಹ ವಿಡಿಯೋವನ್ನು ಅಳಿಸಿ ಹಾಕಲು ಕಾರ್ಯಕ್ರಮದ ಆಯೋಜಕರಲ್ಲಿ ಕೋರಿದ್ದೇನೆ. ನನ್ನನ್ನು ಕ್ಷಮಿಸುವ ಭರವಸೆಯಲ್ಲಿದ್ದೇನೆ’ ಎಂದು ಮನವಿ ಮಾಡಿದ್ದಾರೆ.
ಕೀಳುಮಟ್ಟದ ಹೇಳಿಕೆ ವಿರುದ್ಧ ದೂರು:
ರಣವೀರ್ ಅಲ್ಲಾಬಾದಿಯಾ ವಿವಾದಿತ ಮತ್ತು ಕೀಳುಮಟ್ಟದ ಹೇಳಿಕೆಯ ವಿರುದ್ಧ ಮುಂಬೈ ಮತ್ತು ದೆಹಲಿಯಲ್ಲಿ ದೂರು ದಾಖಲಿಸಲಾಗಿದೆ. ಜೊತೆಗೆ, ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಕಮಿಡಿಯನ್ ಸಮಯ್ ರೈನಾ, ಇನ್ನೊಬ್ಬ ಸಾಮಾಜಿಕ ಮಾಧ್ಯಮ ಪ್ರಭಾವಿ ಅಪೂರ್ವ ಮಖಿಜಾ ಮತ್ತು ಆಯೋಜಕರ ವಿರುದ್ಧ ದೂರು ನೀಡಲಾಗಿದೆ.