ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕೀಯ ಪಕ್ಷಗಳಿಗೆ ಎಲೆಕ್ಟೋರಲ್ ಬಾಂಡ್ ನೀಡುವ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಇಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪಂಚಸದಸ್ಯ ಪೀಠ ವಿಚಾರಣೆ ನಡೆಸಿದೆ.
ಚುನಾವಣಾ ಬಾಂಡ್‌ಗಳ (Electoral Bond) ಮೂಲಕ ಆಡಳಿತದಲ್ಲಿರುವ ರಾಜಕೀಯ ಪಕ್ಷಕ್ಕೆ (Political Parties) ಹೆಚ್ಚಿನ ಕೊಡುಗೆ ಹೋಗುವುದು ರೂಢಿಯಾಗಿದೆ ಎಂದು ಕೇಂದ್ರ ಸರ್ಕಾರ (Central Government) ಹೇಳಿದೆ. ಈ ಮೂಲಕ ಅದು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಸರ್ಕಾರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸಮರ್ಥಿಸಿಕೊಂಡಿದೆ.
ಕೇಂದ್ರ ಸರ್ಕಾರದ ಎಲೆಕ್ಟೋರಲ್ ಬಾಂಡ್ ಸ್ಕೀಮ್ಗೆ ಸಂಬಂಧಿಸಿದಂತೆ ವಾದಗಳನ್ನು ಆಲಿಸಿರುವ ಪೀಠ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಈ ವೇಳೆ ಭಾರತೀಯ ಚುನಾವಣಾ ಆಯೋಗಕ್ಕೆ ಮಹತ್ವದ ನಿರ್ದೇಶನ ನೀಡಿದ ಕೋರ್ಟ್, ಎಲ್ಲ ರಾಜಕೀಯ ಪಕ್ಷಗಳು ಸೆ. 30ರ ವರೆಗೆ ಎಲೆಕ್ಟೋರಲ್ ಬಾಂಡ್ ರೂಪದಲ್ಲಿ ಸ್ವೀಕರಿಸಿರುವ ಫಂಡ್ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ 2 ವಾರಗಳ ಒಳಗಾಗಿ ನೀಡುವಂತೆ ನಿರ್ದೇಶನ ನೀಡಿದೆ.
ಸಿಜೆಐ ಡಿ.ವೈ. ಚಂದ್ರಚೂಡ್ ಅವರ ಜೊತೆಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯ್, ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪಂಚಪೀಠ ಈ ನಿರ್ದೇಶನವನ್ನು ನೀಡಿದೆ.