ಉಸ್ತುವಾರಿ ಸಚಿವರಿಂದ ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

ಹೊಸದಿಗಂತ ವರದಿ ಮಂಗಳೂರು:

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 931 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳು ಮುಂಬರುವ ಡಿಸೆಂಬರ್ ಅಥವಾ ಜನವರಿಯೊಳಗೆ ಪೂರ್ಣಗೊಳ್ಳಲಿವೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಭಾನುವಾರ ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

48 ಕಾಮಗಾರಿಗಳು ಪ್ರಾರಂಭವಾಗಿ ಕೆಲವು ಭಾಗಶಃ ಹಾಗೂ ಕೆಲವು ಪೂರ್ಣಗೊಳ್ಳುವ ಹಂತದಲ್ಲಿವೆ, ಈ ಕಾಮಗಾರಿಗಳು ಕೇವಲ ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿಲ್ಲ, ಅವುಗಳ ಲಾಭ ಸಂಪೂರ್ಣವಾಗಿ ಜಿಲ್ಲೆಯ ಜನತೆಗೆ ದೊರೆಯಬೇಕು. ಮತ್ತು ಕೆಲವು ಕಾಮಗಾರಿಗಳನ್ನು ಸಂಪೂರ್ಣವಾಗಿ ರಾಜ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ವಹಿಸಲಾಗುತ್ತಿದೆ. ಅವುಗಳಿಗೆ ವೇಗ ನೀಡಿ, ಡಿಸೆಂಬರ್ ಅಥವಾ ಜನವರಿ ವೇಳೆಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಮುಖವಾಗಿ ಅಂತರಾಷ್ಟೀಯ ಮಟ್ಟದ ಈಜುಕೊಳ ನಿರ್ಮಾಣವಾಗುತ್ತಿದೆ. ಬಹುಶಃ ರಾಜ್ಯದಲ್ಲಿರುವ ಅತಿ ಪ್ರಮುಖ ಈಜುಕೊಳದಲ್ಲಿ ಇದು ಒಂದಾಗಲಿದೆ. ಉತ್ತಮವಾಗಿ ಬಳಕೆಯಾದಲ್ಲಿ ರಾಜ್ಯ ಹಾಗೂ ಅಂತರಾಜ್ಯ ಕ್ರೀಡಾ ಪಟುಗಳನ್ನು ಸೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಂಗಳೂರು ನಗರದ ಸರ್ವಿಸ್ ಬಸ್‌ ನಿಲ್ದಾಣದ ಸಮಸ್ಯೆಗಳನ್ನು ಬಗೆ ಹರಿಸಿ, ಶಾಶ್ವತ ಕಾಯಕಲ್ಪ ನೀಡಲು ವ್ಯವಸ್ಥಿತ ಕಾಮಗಾರಿಗಳು ನಡೆಯುತ್ತಿದೆ. ಇದುವರೆಗೆ ಇದ್ದ ಎಲ್ಲಾ ಕೊರತೆಗಳನ್ನು ನೀಗಿಸಿ ಉತ್ತಮ ಸರ್ವಿಸ್ ಬಸ್ ನಿಲ್ದಾಣ ಕೆಲವೇ ತಿಂಗಳಲ್ಲಿ ನಿರ್ಮಾಣವಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!