ಮೇಘನಾ ಶೆಟ್ಟಿ, ಶಿವಮೊಗ್ಗ
ಹಸಿದವರಿಗೆ ಮಾತ್ರ ಹಸಿದವರ ಕಷ್ಟ ಗೊತ್ತು ಅನ್ನೋ ಮಾತು ಸುಳ್ಳಲ್ಲ. ಕಷ್ಟಪಟ್ಟು ಮೊದಲ ಮೆಟ್ಟಿಲುಗಳನ್ನು ಹತ್ತಿದವನಿಗೆ ಮಾತ್ರ ಆ ಶ್ರಮದ ಅರಿವು ಇರುತ್ತದೆ.
ನಾನು ಖಾಲಿ ಹೊಟ್ಟೆಯಲ್ಲಿ ಸಾಕಷ್ಟು ಬಾರಿ ಮಲಗಿದ್ದೇನೆ, ಬಡತನ ಹಾಗೂ ಹಸಿವು ಎರಡನ್ನೂ ಸಮಾನವಾಗಿ ಸ್ವೀಕರಿಸಿದ್ದೇನೆ. ಯಾವ ಬಡವನೂ ಖಾಲಿ ಹೊಟ್ಟೆಯಲ್ಲಿ ಮಲಗುವುದು ಬೇಡ ಎಂದು ಹೋಟೆಲ್ ಮಾಡಿದ್ದಾರೆ ಚಿನ್ನತಂಬಿ.
ಎಲ್ಲರೂ ಹೋಟೆಲ್ ಬ್ಯುಸಿನೆಸ್ ಆರಂಭಿಸಬಹುದು, ಅದರಲ್ಲಿ ಸ್ಪೆಶಲ್ ಏನಿದೆ ಅಂತ ನಿಮಗೆ ಅನಿಸಬಹುದು. ಚಿನ್ನತಂಬಿ ಹೋಟೆಲ್‌ನಲ್ಲಿ ಎರಡು ರೂಪಾಯಿಗೆ ದೋಸೆ ಸಿಗುತ್ತದೆ. ಮೂರು ರೂಪಾಯಿಗೆ ಇಡ್ಲಿ, ನಾಲ್ಕು ರೂಪಾಯಿಗೆ ಉತ್ತಪ್ಪಂ. ದಿನಕ್ಕೆ 800ಕ್ಕೂ ಹೆಚ್ಚು ಮಂದಿ ಇಲ್ಲಿ ದೋಸೆ ತಿನ್ನುತ್ತಾರೆ.
ಕನಸು ಹುಟ್ಟಿದ್ದು ಹೀಗೆ..
ತಮಿಳುನಾಡಿನ ತಿರುಚಿಯಲ್ಲಿ ಚಿನ್ನತಂಬಿಯ ದೋಸೆ ಕಾರ್ನರ್ ಇದೆ. ಬಹಳ ಕಷ್ಟಪಟ್ಟು ಚಿನ್ನತಂಬಿ ತನ್ನ ಕುಟುಂಬದವರ ನೆರವಿನಿಂದ ಈ ಹೋಟೆಲ್‌ಗೆ ಜೀವ ತುಂಬಿದ್ದಾರೆ. ಚಿನ್ನತಂಬಿ ಕೂಡ ಈ ಹಿಂದೆ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡ್ತಿದ್ರು. ಆದರೆ ಅಲ್ಲಿರುವ ಆಹಾರ ದುಬಾರಿ. ಅದರಿಂದ ಯಾವ ಬಡವನ ಹೊಟ್ಟೆ ತುಂಬೋದು ಅಸಾಧ್ಯವಾಗಿತ್ತು. ಹಾಗಾಗಿ ತನ್ನದೇ ದೋಸೆ ಹೋಟೆಲ್ ತೆಗೆಯುವ ಕನಸು ಹೊತ್ತು ತಂಬಿ ಬ್ಯುಸಿನೆಸ್ ಆರಂಭಿಸಿದ್ದರು.
ಜನರೇ ಬರಲಿಲ್ಲ!
ಮೊದ ಮೊದಲು ದೋಸೆ ರುಚಿ ನೋಡಲೂ ಜನ ಬರಲಿಲ್ಲ. ಎರಡು ರೂಪಾಯಿಗೆ ಒಂದು ದೋಸೆ ಕೊಟ್ಟರೂ ಹೆಚ್ಚು ಮಂದಿ ಇದನ್ನು ತಿನ್ನಲಿಲ್ಲ. ಹಾಕಿದ್ದ ಬಂಡವಾಳದ ಅರ್ಧವೂ ಬರದೇ ತಂಬಿ ಹಾಗೂ ಕುಟುಂಬ ಕಣ್ಣೀರಿಟ್ಟಿದೆ. ಈಗ ತಂಬಿ ಅವರ ಹೋಟೆಲ್‌ಗೆ ಎಲ್ಲಿಲ್ಲದ ಬೇಡಿಕೆ ಇದೆ. ದಿನವೂ ಬರುವ ಕಸ್ಟಮರ‍್ಸ್‌ಗಳಿಗೆ ತಂಬಿ ಬಿಸಿ ಬಿಸಿ ದೋಸೆ ಹಾಕಿಕೊಡ್ತಾರೆ. ದೋಸೆ ಜೊತೆ ಫ್ರೀಯಾಗಿ ಎರಡು ರೀತಿ ಪಲ್ಯಾ, ಎರಡು ರೀತಿ ಚಟ್ನಿ ಹಾಗೂ ಸಾಂಬಾರ್ ನೀಡುತ್ತಾರೆ.
ಹಸಿದು ಮಲಗಬಾರದು ಸ್ವಾಮಿ..
ಪರೋಟಾ,ಆಮ್ಲೆಟ್ ಕೂಡ ಸೇರಿ ಒಟ್ಟಾರೆ 24 ವೆರೈಟಿ ಆಹಾರ ಇಲ್ಲಿ ಸಿಗುತ್ತದೆ. ಭಿಕ್ಷುಕರು, ಕಾರ್ಮಿಕರು, ದಿನಗೂಲಿ ಮಾಡುವವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹತ್ತು ರೂಪಾಯಿ ಕೊಟ್ಟು ಐದು ದೋಸೆ ತಿಂದು ಖುಷಿಯಾಗಿ ಹೋಗುತ್ತಾರೆ. ಇಷ್ಟು ಕಡಿಮೆ ಹಣಕ್ಕೆ ದೋಸೆ ನೀಡುವುದರಿಂದ ನನಗೆ ಹೆಚ್ಚಿನ ಲಾಭ ಸಿಗೋದಿಲ್ಲ, ಆದರೆ ಯಾರೂ ಹಸಿದು ಮಲಗೋದಿಲ್ಲ, ನನ್ನ ಕೈಲಾದ ಸಹಾಯ ನಾನು ಮಾಡುತ್ತಿದ್ದೀನಿ ಎನ್ನುವ ತೃಪ್ತಿ ನನಗಿದೆ ಎಂದು ಚಿನ್ನತಂಬಿ ಹೇಳುತ್ತಾರೆ.
ಕೂರೋಕೆ ಪ್ಲಾಸ್ಟಿಕ್ ಸ್ಟೂಲ್
ಇದು ದೊಡ್ಡ ಹೋಟೆಲ್ ಅಲ್ಲ, ಕೂರಲು ಸರಿಯಾದ ವ್ಯವಸ್ಥೆಯೂ ಇಲ್ಲ. ಆದರೆ ಪ್ಲಾಸ್ಟಿಕ್ ಸ್ಟೂಲ್‌ಗಳ ಮೇಲೆ ಕುಳಿತು ರುಚಿಯಾದ ಇಡ್ಲಿ, ದೋಸೆ ತಿನ್ನೋದಕ್ಕೆ ಗ್ರಾಹಕರಿಗೆ ಯಾವ ತೊಂದರೆಯೂ ಇಲ್ಲ. ಈ ಹೋಟೆಲ್ ಸಂಜೆ 6 ರಿಂದ ರಾತ್ರಿ 11 ರವರೆಗೆ ಮಾತ್ರ ತೆಗೆದಿರುತ್ತದೆ. ಮಧ್ಯಾಹ್ನದ ಊಟ ಕಡಿಮೆ ರೇಟ್‌ಗೆ ಎಲ್ಲ ಕಡೆ ಸಿಗುತ್ತದೆ. ರಾತ್ರಿ ಊಟ ಸಿಗೋದಿಲ್ಲ. ರಾತ್ರಿ ಯಾರೂ ಹಸಿದು ಮಲಗಬಾರದು ಅನ್ನೋದು ನನ್ನ ಉದ್ದೇಶ ಎಂದು ಚಿನ್ನತಂಬಿ ಹೇಳ್ತಾರೆ.
ಕುಟುಂಬವೇ ಶಕ್ತಿ
ಪ್ರತಿದಿನ 4 ಗಂಟೆಗೆ ಚಿನ್ನತಂಬಿ ಎದ್ದುಬಿಡುತ್ತಾರೆ. ಉದ್ದಿನಬೇಳೆ ಅಕ್ಕಿ ನೆನೆಸುತ್ತಾರೆ. ತರಕಾರಿಗಳನ್ನು ತಂದು ಪಲ್ಯಾ, ಸಾಂಬಾರ್ ಮಾಡುತ್ತಾರೆ. ಇದಕ್ಕೆ ಇವರ ಕುಟುಂಬದ ಸಂಪೂರ್ಣ ಬೆಂಬಲ ಇದೆ. ನನಗೆ ಈ ಹೋಟೆಲ್‌ನಿಂದ ಲಾಭ ಇಲ್ಲ, ಅಂದಿನದ್ದು ಅಂದು ತಿಂದು ಬದುಕುತ್ತೇವೆ, ಆದರೆ ತೃಪ್ತಿ ಇದೆ. ಮಕ್ಕಳು ಕೂಡ ತಮ್ಮ ಪಾಕೆಟ್ ಮನಿಯಲ್ಲಿ ಇಲ್ಲಿ ದೋಸೆ ತಿನ್ನಲು ಬರ‍್ತಾರೆ. ಇದಕ್ಕಿಂತ ಖುಷಿ ಇನ್ನೇನಿದೆ ಎನ್ನುತ್ತಾರೆ ಚಿನ್ನತಂಬಿ.
ಎಷ್ಟಿದ್ದರೂ ಸಾಲದು ಅನ್ನೋ ಈ ಕಾಲದಲ್ಲಿ, ನಾನೂ ತಿನ್ನಬೇಕು, ಜನರೂ ತಿನ್ನಬೇಕು ಅನ್ನೋರು ಸಿದೋದು ವಿರಳ. ನೀವು ಕೂಡ ಎಂದಾದರೂ ತಿರುಚಿ ಕಡೆ ಹೋದರೆ ಈ ಹೋಟೆಲ್‌ಗೆ ಹೋಗಿ ದೋಸೆ ತಿನ್ನೋದು ಮರಿಬೇಡಿ!