ಕೊಂಗಂಡ ಗಣಪತಿ ನಾಮಫಲಕ ಅಳವಡಿಸಿ: ಮುತ್ತಪ್ಪಕೇರಿ ಕೊಡವ ಸಂಘ ಒತ್ತಾಯ

ಹೊಸದಿಗಂತ ವರದಿ, ಕೊಡಗು:

ನಗರದ ಗಣಪತಿ ಬೀದಿಯಲ್ಲಿದ್ದ ಕೊಂಗಂಡ ಗಣಪತಿ ನಾಮಫಲಕವನ್ನು ಮರು ಸ್ಥಾಪಿಸಬೇಕು ಮತ್ತು ರಸ್ತೆ ವಿಸ್ತರಣೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಶ್ರೀ ಮುತ್ತಪ್ಪಕೇರಿ ಕೊಡವ ಸಂಘ ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಶಾಂತೆಯಂಡ ಸನ್ನಿ ಪೂವಯ್ಯ ಅವರ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರಿಗೆ ಮನವಿ ಸಲ್ಲಿಸಿದ ಪ್ರಮುಖರು, ಗಣಪತಿ ಬೀದಿಯ ಅವ್ಯವಸ್ಥೆಗಳ ಕುರಿತು ಗಮನ ಸೆಳೆದರು.
ಗಣಪತಿ ಬೀದಿಯ ನಿವಾಸಿಗಳಿಗೆ ನೀರು ಒದಗಿಸಲು ಈ ಹಿಂದೆ ಉದಾರವಾಗಿ ಸಹಕಾರ ನೀಡಿ ಮಾದರಿಯಾಗಿದ್ದ ದಿ.ಕೊಂಗಂಡ ಗಣಪತಿಯವರು ಚಿರಸ್ಮರಣೀಯರು. ಇವರ ಹೃದಯ ವಿಶಾಲತೆಯನ್ನು ಪರಿಗಣಿಸಿ ಮಹದೇವಪೇಟೆ ಗಣಪತಿ ಬೀದಿ ರಸ್ತೆ ಸೇರುವ ಜಾಗದಲ್ಲಿ ಸ್ಮಾರಕ ಫಲಕವನ್ನು ಅಳವಡಿಸಲಾಗಿತ್ತು.ಇತ್ತೀಚೆಗೆ ಗಣಪತಿ ಬೀದಿ ರಸ್ತೆ ವಿಸ್ತರಣೆ ಸಂದರ್ಭ ಫಲಕವನ್ನು ತೆರವು ಮಾಡಲಾಗಿದ್ದು, ಮರು ಸ್ಥಾಪಿಸುವ ಕಾರ್ಯ ನಡೆದಿಲ್ಲ ಎಂದು ಆರೋಪಿಸಿದರು.
ಜನರಿಗೆ ಉಪಯೋಗವಾಗುವಂತೆ ಈ ಹಿಂದೆ ನೀರಿನ ಸೌಲಭ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟ ಗಣಪತಿ ಅವರನ್ನು ನಗರಸಭೆ ಎಂದಿಗೂ ಮರೆಯಬಾರದು. ಇವರ ಹೆಸರು ಚಿರಸ್ಥಾಯಿ ಆಗಿರುವಂತೆ ನಾಮಫಲಕವನ್ನು ಸೂಕ್ತ ಸ್ಥಳದಲ್ಲಿ ಅಳವಡಿಸಬೇಕೆಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಗಣಪತಿ ಬೀದಿ ರಸ್ತೆ ವಿಸ್ತರಣೆ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರು, ವಾಹನ ಚಾಲಕರು ಹಾಗೂ ಸ್ಥಳೀಯ ನಿವಾಸಿಗಳು ಕಷ್ಟ ಪಡುವಂತಾಗಿದೆ. ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಶಾಂತೆಯಂಡ ಕಿಶು ದೇವರಾಜ್, ಸದಸ್ಯರಾದ ಶಾಂತೆಯಂಡ ವಿಶಾಲ್ ಅಚ್ಚಯ್ಯ, ಪಡೆಯಂಡ ಮಣಿ ಮೇದಪ್ಪ, ಕುಪ್ಪಂಡ ವಸಂತ್ ಚಿಣ್ಣಪ್ಪ, ಮಾಜಿ ಅಧ್ಯಕ್ಷ ಮುಂಡಂಡ ಗಾಂಧಿ, ಮಾಜಿ ಕಾರ್ಯದರ್ಶಿ ಕನ್ನಂಡ ಸುಧಾ ಬೊಳ್ಳಪ್ಪ, ಮಾಜಿ ಖಜಾಂಚಿ ಅಲ್ಲಾರಂಡ ರವಿ ಅಯ್ಯಪ್ಪ ಮನವಿ ನೀಡುವ ಸಂದರ್ಭ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!