ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಹಿಂದಿನ ಕಾಂಗ್ರೆಸ್ ಆಡಳಿತಗಳು ಉದ್ವಿಗ್ನತೆಯನ್ನು ಹೆಚ್ಚಿಸಿ ದೇಶವನ್ನು ವಿಭಜಿಸು ಸಾರ್ವಜನಿಕವಾಗಿ ವೈಷಮ್ಯ ಉಂಟು ಮಾಡುತ್ತಿದ್ದಾರೆ. ಆದರೆ ನಾವು ದಲಿತರು ಮತ್ತು ಒಬಿಸಿಗಳ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಸ್‌ಸಿ ಮತ್ತು ಎಸ್‌ಟಿ ಕಾನೂನುಗಳನ್ನು ಬಲಪಡಿಸಿದ್ದೇವೆ ಎಂದರು.
ಕಳೆದ ಎರಡು ದಶಕಗಳಿಂದ, ಒಬಿಸಿ ಸಂಸದರು ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದರು, ಆದರೆ ಅದನ್ನು ಕಾಂಗ್ರೆಸ್ ಸರ್ಕಾರ ತಿರಸ್ಕರಿಸಿತು. ಆದರೆ ನಾವು ಅದನ್ನು ರಚಿಸಿದ್ದೇವೆ ಎಂದರು.
ಇನ್ನು ಸಾಮಾನ್ಯ ವರ್ಗದ ಬಡವರಿಗೆ 10% ಮೀಸಲಾತಿಯನ್ನು ಸಮರ್ಥಿಸಿಕೊಂಡ ಪ್ರಧಾನಿಯವರು, ನಾವು ಸಾಮಾನ್ಯ ವರ್ಗದ ಬಡವರಿಗೆ 10% ಮೀಸಲಾತಿಯನ್ನು ನೀಡಿದ್ದೇವೆ, ಇದನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳು ಸ್ವಾಗತಿಸಿವೆ ಎಂದರು.
ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಕಾಂಗ್ರೆಸ್ ಪಕ್ಷವು ತೀವ್ರ ಕೋಪ ಮತ್ತು ದ್ವೇಷವನ್ನು ಹೊಂದಿದೆ. ಅವರು (ಕಾಂಗ್ರೆಸ್) ಬಾಬಾ ಸಾಹೇಬ್ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಅರ್ಹರು ಎಂದು ಎಂದಿಗೂ ಪರಿಗಣಿಸಲಿಲ್ಲ. ಆದರೆ ಇಂದು ಬಲವಂತದಿಂದಾಗಿ ಅವರಿಗೆ ‘ಜೈ ಭೀಮ್’ ಘೋಷಣೆಯನ್ನು ಕೂಗಬೇಕಾದ ಪರಿಸ್ಥಿತಿ ಬಂದಿದೆ. ಆದ್ದರಿಂದ ಅವರು ತಮ್ಮ ಮುಖವಾಡವನ್ನು ಎಷ್ಟು ಬೇಗನೆ ಬದಲಾಯಿಸುತ್ತಾರೆಂದರೆ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರಂತೆ ಅವರು ಬಣ್ಣಗಳನ್ನು ಬದಲಾಯಿಸುವುದರಲ್ಲಿ ಪರಿಣಿತರಂತೆ ಕಾಣುತ್ತದೆ ಎಂದರು.
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಅವರಿಗೆ ಸೂಕ್ತವಾದ ಗೌರವ ಮತ್ತು ಸ್ಥಾನಮಾನಗಳನ್ನು ಒದಗಿಸಿಲ್ಲ. ಕಾಂಗ್ರೆಸ್ ಮಹಾನ್ ಸಾಧಕನಿಗೆ ಭಾರತ ರತ್ನವನ್ನೂ ನೀಡಲಿಲ್ಲ. 1990ರಲ್ಲಿ ಜನತಾದಳದ ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದಾಗ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಯಿತು. ಕಾಂಗ್ರೆಸ್ ಅಂಬೇಡ್ಕರ್‌ಗೆ ಮಾಡಿದ ಮೋಸದ ಪಟ್ಟಿಯೇ ಇದೆ. ಕಾಂಗ್ರೆಸ್‌ಗೆ ಬಿ.ಆರ್. ಅಂಬೇಡ್ಕರ್ ಬಗ್ಗೆ ದ್ವೇಷ, ಕೋಪವಿತ್ತು, ಲೋಕಸಭಾ ಚುನಾವಣೆಯಲ್ಲಿ ಅವರನ್ನು ಎರಡು ಬಾರಿ ಸೋಲಿಸಲು ಎಲ್ಲ ಪ್ರಯತ್ನಗಳನ್ನು ಮಾಡಿತ್ತು ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.
ಬಿಜೆಪಿಯ ಮೂಲ ಮಂತ್ರ ಯಾವಾಗಲೂ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಆಗಿದ್ದರೆ, ಕಾಂಗ್ರೆಸ್ ಕೆಲಸ ಯಾವಾಗಲೂ ಇತರರ ಸಾಧನೆಗಳನ್ನು ಕುಂಠಿತಗೊಳಿಸುವುದಾಗಿದೆ ಎಂದ ಅವರು, ಹಲವು ಸರ್ಕಾರಗಳನ್ನು ಅಸ್ಥಿರಗೊಳಿಸಿದರು. ಆದರಂತೆ ಅವರು, ಯಾವುದೇ ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷವಾದರೂ ಸರಿ, ಸರ್ಕಾರವನ್ನು ರಚಿಸಿದಾಗಲೆಲ್ಲಾ, ಇತರರ ಪ್ರಯತ್ನಗಳನ್ನು ಅತ್ಯಲ್ಪವೆಂದು ತೋರುವ ಮೂಲಕ ಅದನ್ನು ಅಸ್ಥಿರಗೊಳಿಸಲು ಕೆಲಸ ಮಾಡಿದರು. ಆದರೆ ಇಂದು ಅವರರೊಂದಿಗೆ ಲೋಕಸಭೆಯ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡವರು ಸಹ ಓಡಿಹೋಗುತ್ತಿದ್ದಾರೆ ಎಂದರು.
ಸ್ವಾತಂತ್ರ್ಯ ಬಂದ ಕೂಡಲೇ ಕಾಂಗ್ರೆಸ್ ಸಂವಿಧಾನ ನಿರ್ಮಾತೃಗಳನ್ನು ಗೌರವಿಸದೇ, ಅವರ ಭಾವನೆಗಳನ್ನು ಕಸದ ಬುಟ್ಟಿಗೆ ಹಾಕಿತು. ಆದರಂತೆ ಭಾರತದಲ್ಲಿ ಚುನಾಯಿತ ಸರ್ಕಾರ ಇಲ್ಲದ ಸಂದರ್ಭದಲ್ಲಿ ತಾತ್ಕಾಲಿಕ ವ್ಯವಸ್ಥೆ ಜಾರಿಯಲ್ಲಿದ್ದಾಗ, ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಯಿತು. ಇದರಿಂದ ಅವರು (ನೆಹರೂ) ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಸಂವಿಧಾನದ ಭಾವನೆಗೆ ಅಗೌರವ ತೋರಿದ್ದಾರೆ ಎಂದರು.
ತುರ್ತು ಪರಿಸ್ಥಿತಿಯನ್ನು ಟೀಕಿಸಿದ್ದಕ್ಕೆ ಬಾಲಿವುಡ್ ಹಿರಿಯ ನಟ ದೇವ್ ಆನಂದ್ ಅವರ ಚಲನಚಿತ್ರಗಳನ್ನು ನಿಷೇಧಿಸಲಾಗಿತ್ತು. ಆಗಿನ ಖ್ಯಾತ ಗಾಯಕ ಕಿಶೋರ್ ಕುಮಾರ್ ಕಾಂಗ್ರೆಸ್ ಪರವಾಗಿ ಹಾಡಲು ನಿರಾಕರಿಸಿದರು. ಇದರ ಪರಿಣಾಮವಾಗಿ, ಕಿಶೋರ್ ಕುಮಾರ್ ಅವರ ಎಲ್ಲಾ ಹಾಡುಗಳನ್ನು ಆಕಾಶವಾಣಿಯಲ್ಲಿ ನಿಷೇಧಿಸಲಾಯಿತು. ತುರ್ತು ಪರಿಸ್ಥಿತಿಯ ದಿನಗಳನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜವಹರಲಾಲ್ ನೆಹರೂ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮುಂಬೈನಲ್ಲಿ ಕಾರ್ಮಿಕರ ಮುಷ್ಕರ ನಡೆಯಿತು. ಆ ಮುಷ್ಕರದ ಸಮಯದಲ್ಲಿ ಪ್ರಸಿದ್ಧ ಕವಿ ಮಜ್ರೂಹ್ ಸುಲ್ತಾನಪುರಿ ಒಂದು ಕವಿತೆಯನ್ನು ವಾಚಿಸಿದರು. ಇದರ ನಂತರ ಅವರನ್ನು ಜೈಲಿಗೆ ಹಾಕಲಾಯಿತು. ಆ ಸಮಯದಲ್ಲಿ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಸಿದ್ಧ ನಟ ಬಲರಾಜ್ ಸಾಹ್ನಿಯನ್ನೂ ಜೈಲಿಗೆ ಹಾಕಲಾಯಿತು. ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರು ವೀರ ಸಾವರ್ಕರ್ ಕುರಿತಾದ ಒಂದು ಕವಿತೆ ಬರೆದಿದ್ದರು, ಅದನ್ನು ಆಕಾಶವಾಣಿಯಲ್ಲಿ ಹಾಡಲು ಬಯಸಿದ್ದರು. ಆದರೆ ಅವರನ್ನು ಆಕಾಶವಾಣಿಯಿಂದ ಜೀವಿತಾವಧಿಯವರೆಗೆ ನಿಷೇಧಿಸಲಾಯಿತು ಎಂದಿದ್ದಾರೆ.