ಹೊಸದಿಗಂತ ವರದಿ ಮಡಿಕೇರಿ:
ಸಾಮಾಜಿಕ ಜಾಲತಾಣಗಳಲ್ಲಿ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅವಹೇಳನ ಮಾಡಿರುವ ಆರೋಪಿ, ವಕೀಲ ವಿದ್ಯಾಧರ್’ಗೆ ಕಠಿಣ ಶಿಕ್ಷೆ ನೀಡುವುದರೊಂದಿಗೆ ಕೊಡಗಿನಿಂದ ಗಡಿಪಾರು ಮಾಡಬೇಕು ಎಂದು ಕೊಡಗು ಸರ್ವ ಜನಾಂಗಗಳ ಒಕ್ಕೂಟ ಒತ್ತಾಯಿಸಿದೆ.
ಈ ಸಂಬಂಧ ಸರಕಾರದ ಗಮನಸೆಳೆಯುವ ದಿಸೆಯಲ್ಲಿ ಡಿ.12ರಂದು ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೊಡಗು ಬಂದ್’ಗೆ ಕರೆ ನೀಡಿದೆ. ಒಕ್ಕೂಟದ ಈ ಕರೆಗೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಕೂಡಾ ಕೈಜೋಡಿಸಿದೆ.
ಮಂಗಳವಾರ ನಗರದಲ್ಲಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡ ರಾಜೀವ್ ಬೋಪಯ್ಯ, ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಹಾಗೂ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದರು.
ಶಾಂತಿ ಮತ್ತು ಸಹಬಾಳ್ವೆಗೆ ಹೆಸರಾಗಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾತೀಯ ಮತ್ತು ಮತೀಯ ಸಂಘರ್ಷ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಂಡು ಬರುತ್ತಿದೆ. ಇಂದು ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ಪೀಳಿಗೆ ಕೊಡಗಿನಲ್ಲಿ ಕೇವಲ ದ್ವೇಷ ಮತ್ತು ಅಸೂಯೆಯ ವಾತಾವರಣದಲ್ಲೇ ಬದುಕಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುವ ಸಂಭವವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಜಾತಿ ಮತ್ತು ಮತಗಳ ನಡುವಿನ ವೈಮನಸ್ಯ ದೂರವಾಗಬೇಕು, ಕೋಮು ಸೌಹಾರ್ದತೆ ಸ್ಥಾಪನೆಯಾಗಬೇಕು, ಕೊಡಗಿನಲ್ಲಿ ಪ್ರೀತಿ, ವಾತ್ಸಲ್ಯ, ನಂಬಿಕೆ, ಸಾಮರಸ್ಯದ ಬದುಕು ಕಂಡು ಬರಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ಜಾತಿ ಮತ ಧರ್ಮದವರನ್ನು ಒಂದೆಡೆ ಸೇರಿಸಿ ಕೊಡಗು ಸರ್ವ ಜನಾಂಗದ ಒಕ್ಕೂಟ ಎಂಬ ಸಂಘಟನೆಯನ್ನು ಹುಟ್ಟು ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಜನಾಂಗ ಯಾವುದೇ ಧರ್ಮಗಳ ವಿರುದ್ಧ ಸಾರ್ವಜನಿಕವಾಗಿ ನಿಂದಿಸುವುದಾಗಲಿ, ಮಾಧ್ಯಮ ಹೇಳಿಕೆಗಳನ್ನು ನೀಡುವುದಾಗಲಿ, ಸಾಮಾಜಿಕ ಜಾಲತಾಣವನ್ನು ಬಳಸಿ ಶಾಂತಿ ಕದಡುವ ಪ್ರಯತ್ನವನ್ನು ಮಾಡುವುದರ ವಿರುದ್ಧ ಕೊಡಗು ಸರ್ವ ಜನಾಂಗದ ಒಕ್ಕೂಟ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇದಕ್ಕೆ ಒಂದು ಉತ್ತಮ ರೂಪರೇಷೆಯನ್ನು ಕಲ್ಪಿಸಿ ಕೊಡಗು ಜಿಲ್ಲೆಯಲ್ಲಿ ಈ ಸಂಘಟನೆಯನ್ನು ಬಲಿಷ್ಠಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಂಘಟನೆಯ ಮೊದಲ ಕಾರ್ಯಕ್ರಮವಾಗಿ ಇತ್ತೀಚೆಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹೀನಾಯವಾಗಿ ನಿಂದಿಸಿರುವ ವಿದ್ಯಾಧರ್ ಎಂಬ ವ್ಯಕ್ತಿಯನ್ನು ಕನಿಷ್ಟ ಆರು ತಿಂಗಳ ಕಾಲ ಕೊಡಗು ಜಿಲ್ಲೆಯಿಂದ ಗಡಿಪಾರು ಮಾಡಬೇಕೆನ್ನುವ ಬೇಡಿಕೆಯನ್ನು ಸರ್ಕಾರದ ಮುಂದಿಡಲು ಡಿ.12 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಕೊಡಗು ಜಿಲ್ಲಾ ಬಂದ್ ಆಚರಿಸುವ ಮೂಲಕ ಜಿಲ್ಲೆಯ ಶಾಂತಿಗೆ ಧಕ್ಕೆ ತರುವ ಪ್ರಯತ್ನಗಳು ಮುಂದೆಂದೂ ಆಗಬಾರದೆನ್ನುವ ಸಂದೇಶವನ್ನು ಜಿಲ್ಲೆಯ ಜನತೆಯ ಮುಂದಿಡಲು ಪ್ರಯತ್ನಿಸಲಾಗುತ್ತಿದೆ ಎಂದು ವಿವರಿಸಿದರು.
ರಜೆ ಘೋಷಿಸಲು ಮನವಿ: ಒಕ್ಕೂಟದ ಈ ಕರೆಗೆ ಜಿಲ್ಲೆಯ ವಿವಿಧ ಜಾತಿಯ ಸಂಘಟನೆಗಳು, ಸಾರ್ವಜನಿಕ ಸಂಘ ಸಂಸ್ಥೆಗಳು, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಜಿಲ್ಲಾ ಆಟೋ ಚಾಲಕರ ಸಂಘ, ಮಾಜಿ ಸೈನಿಕರ ಸಂಘ ಧಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದ ಅವರುಗಳು, ಕೊಡಗು ಬಂದ್ ಸಂದರ್ಭ ಕೊಡಗು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಸರಕಾರಕ್ಕೆ ಈ ಮೂಲಕ ಮನವಿ ಮಾಡುತ್ತಿರುವುದಾಗಿ ಹೇಳಿದರು.
ಡಿ.12ರ ಸಾಂಕೇತಿಕ ಬಂದ್’ಗೆ ಕೊಡಗು ಜಿಲ್ಲಾ ಬಸ್ ಮಾಲಕರ ಸಂಘ, ಆಟೋ ಚಾಲಕರು ಮತ್ತು ಮಾಲಕರ ಸಂಘ, ಲಾರಿ ಮಾಲಕರು ಮತ್ತು ಚಾಲಕರ ಸಂಘ, ಕಾರು ಮಾಲಕರು ಮತ್ತು ಚಾಲಕರ ಸಂಘ ಸೇರಿದಂತೆ ಎಲ್ಲಾ ವಾಹನಗಳ ಸಂಘಟನೆಗಳನ್ನು, ಜಿಲ್ಲೆಯ ಎಲ್ಲಾ ಅಂಗಡಿ ವಹಿವಾಟು ಮಾಲಕರನ್ನು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲರನ್ನೂ, ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರನ್ನು ಕೇಳಿಕೊಳ್ಳುತ್ತಿರುವುದಾಗಿಯೂ ನುಡಿದ ಅವರುಗಳು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘಟನೆಗಳನ್ನು ಜೊತೆಗೂಡಿಸಿ, ಕೊಡಗಿನಲ್ಲಿ ಸಾಮಾಜಿಕ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೊಡಗು ಸರ್ವ ಜನಾಂಗದ ಒಕ್ಕೂಟ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.