ಹೊಸದಿಗಂತ ವರದಿ ಬನವಾಸಿ:
ಜಿಲ್ಲೆಯಲ್ಲಿ ದನಕರುಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರ್ ಜಿಲ್ಲಾ ದನಗಳ್ಳರನ್ನು ಬನವಾಸಿ ಪೊಲೀಸರ ವಿಶೇಷ ತಂಡ ಬಂಧಿಸಿದ್ದು ಕಳ್ಳತನಕ್ಕೆ ಬಳಸುತ್ತಿದ್ದ ವಾಹನವನ್ನು ವಶಕ್ಕೆ
ಪಡೆಯಲಾಗಿದೆ.
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊನ್ನೆಬಾಗಿ ನಿವಾಸಿ ಮಹಮ್ಮದ ಇಸ್ಮಾಯಿಲ್ ಮಹಮ್ಮದ ಅನ್ಸಾರ್(20) ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮಹಮ್ಮದ ಯಾಸೀನ್ ಮಹಮ್ಮದ ವಾಸಿಂ(26)ಬಂಧಿತ ಆರೋಪಿಗಳಾಗಿದ್ದು ಬಂಧಿತರು ದನಗಳನ್ನು ಸಾಗಿಸಲು ಬಳಸುತ್ತಿದ್ದ ಸುಮಾರು 2 ಲಕ್ಷ ಮೌಲ್ಯದ ಕೆ.ಎ17ಎಎ7082 ನೋಂದಣಿ ಸಂಖ್ಯೆಯ ಟಾಟಾ ಇನ್ಟ್ರಾ ವಾಹನವನ್ನು ಜಪ್ತು ಪಡಿಸಲಾಗಿದೆ.
ಬನವಾಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೇ 20 ರ ರಾತ್ರಿ 11 ಗಂಟೆಯಿಂದ ಮೇ21 ರ ಬೆಳಗಿನ ಜಾವ 6 ಗಂಟೆ ನಡುವಿನ ಅವಧಿಯಲ್ಲಿ ಮನೆಯ ಎದುರಿನ ರಸ್ತೆಯ ಪಕ್ಕ ಮಲಗಿದ್ದ ಆಕಳನ್ನು ಕಳ್ಳತನ ಮಾಡಿರುವ ಕುರಿತಂತೆ ಬನವಾಸಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠ ದೀಪನ್.ಎಂ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ.ಜಿ, ಶಿರಸಿ ಡಿ.ವೈ.ಎಸ್.ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಶಿರಸಿ ವೃತ್ತ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಬನವಾಸಿ ಠಾಣೆಯ ಪಿ.ಎಸ್.ಐಗಳಾದ ಮಹಾಂತಪ್ಪ ಕಂಬಾರ್,ರವೀಂದ್ರ ಬಿರಾದಾರ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬನವಾಸಿ ಪೊಲೀಸರ ಸಾಧನೆಗೆ ಜಿಲ್ಲಾ ಪೊಲೀಸ್ ವರಿಷ್ಠ ದೀಪನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



