ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ರಚನೆ: ಹಿಂದುಗಳನ್ನು ರಕ್ಷಿಸಿ ಎಂದು ಯೂನಸ್‌ಗೆ ಪ್ರಧಾನಿ ಮೋದಿ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿ ಹಂಗಾಮಿ ಸರ್ಕಾರ ರಚನೆಯಾಗಿದೆ. ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನಸ್‌ ಅವರು ಪದಗ್ರಹಣ ಮಾಡಿದ್ದಾರೆ.

ಇನ್ನು, ಮೊಹಮ್ಮದ್‌ ಯೂನಸ್‌ ಅವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿ ಹಿಂದುಗಳನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.

‘ನೂತನ ಜವಾಬ್ದಾರಿ ವಹಿಸಿಕೊಂಡಿರುವ ಪ್ರೊಫೆಸರ್‌ ಮೊಹಮ್ಮದ್‌ ಯೂನಸ್‌ ಅವರಿಗೆ ಶುಭಾಶಯಗಳು. ಬಾಂಗ್ಲಾದೇಶದಲ್ಲಿ ಎಲ್ಲವೂ ಸಹಜಸ್ಥಿತಿಗೆ ಬರಲಿದೆ ಎಂಬ ವಿಶ್ವಾಸವಿದೆ. ಹಾಗೆಯೇ, ಹಿಂದುಗಳು ಸೇರಿ ಎಲ್ಲ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುತ್ತೀರಿ ಎಂಬ ನಂಭಿಕೆ ಇದೆ. ಉಭಯ ದೇಶಗಳ ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿಯ ಕುರಿತು ಮುಂದಿನ ದಿನಗಳಲ್ಲೂ ಭಾರತದ ಸಹಕಾರ ಇರಲಿದೆ’ ಎಂಬುದಾಗಿ ನರೇಂದ್ರ ಮೋದಿ ಪೋಸ್ಟ್‌ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ದೇವಾಲಯಗಳು ಸೇರಿ 97ಕ್ಕೂ ಹಿಂದು ಸ್ಥಳಗಳ ಮೇಲೆ ದಾಳಿ ಇಸ್ಲಾಮಿಕ್‌ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವುದು, ಹಿಂದು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು ಸೇರಿ ಹಲವು ರೀತಿಯಲ್ಲಿ ದಾಳಿ ನಡೆಸಲಾಗಿದೆ. ಹಾಗಾಗಿ, ಮೋದಿ ಅವರು ಹಿಂದುಗಳ ರಕ್ಷಣೆಗೆ ಆದ್ಯತೆ ನೀಡಿ ಎಂದು ಕೋರಿದ್ದಾರೆ.

ಮೊಹಮ್ಮದ್‌ ಯೂನಸ್‌ ಅವರೊಂದಿಗೆ 15 ಸಲಹೆಗಾರರು ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಬಾಂಗ್ಲಾದೇಶದಲ್ಲಿ ಹೊಸದಾಗಿ ಚುನಾವಣೆ ನಡೆದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಮೊಹಮ್ಮದ್‌ ಯೂನಸ್‌ ಅವರೇ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರಿಗೆ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (BNP) ಬೆಂಬಲವಿದೆ. ಇದರೊಂದಿಗೆ ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಅವರ ಆಡಳಿತ ಅಂತ್ಯವಾಗಿ, ಮೊಹಮ್ಮದ್‌ ಯೂನಸ್‌ ಅವರ ಆಡಳಿತ ಜಾರಿಗೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!