ಹೊಸದಿಗಂತ ವರದಿ,ಮಡಿಕೇರಿ:
ಮನೆ ಮಂದಿಯನ್ನು ಬೆದರಿಸಿ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದ ನೇಪಾಳ ಮೂಲದ ನಾಲ್ವರು ಆರೋಪಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನೇಪಾಳ ಮೂಲದ ದಿಲ್ ಬಹದ್ದೂರು ರಾಹುಲ್, ಈಶ್ವರ್ ಥಾಪಾ, ಪ್ರೇಮ್ ಬಹದೂರ್ ಖಡ್ಯಾ ಹಾಗೂ ಸುದೀಪ್ ಜೇತಾರ ಎಂಬವರೇ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.
ಪ್ರಕರಣದ ವಿವರ: ನಾಪೋಕ್ಲು ಪೊಲೀಸ್ ಠಾಣೆ ಮತ್ತು ನಾಪೋಕ್ಲು ಗ್ರಾಮ ಪಂಚಾಯ್ತಿ ಸರಹದ್ದಿಗೆ ಸೇರಿದ ಕೊಳಕೇರಿ ಗ್ರಾಮದ ಮೂಟೇರಿ ಎಂಬಲ್ಲಿ ವಾಸವಿದ್ದ ವಿಜಿ ಬೋಪಯ್ಯ ಎಂಬವರ ಮನೆಗೆ 2022ರ ಜ.31ರಂದು ಬಲವಂತವಾಗಿ ನುಗ್ಗಿದ ಆರೋಪಿಗಳು, ಆ ಮನೆಯಲ್ಲಿದ್ದ ವಿ.ಜಿ.ಜಾನಕಿ ಮತ್ತು ವಿ.ಜಿ.ಅಮ್ಮಕ್ಕಿ ಎಂಬವರಿಗೆ ಚಾಕು ತೋರಿಸಿ, ಬೊಬ್ಬೆ ಹಾಕಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಬಾಯಿ, ಕೈಗಳು ಮತ್ತು ಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಕೈಗಳಿಂದ ಹೊಡೆದು, ಸಾಮಾನ್ಯ ಸ್ವರೂಪದ ಗಾಯಪಡಿಸಿ, ಮನೆಯಲ್ಲಿರುವ ಗಾಡೇಜ್’ನಿಂದ 2.50 ಲಕ್ಷ ರೂ.ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಈ ಕುರಿತು ನಾಪೋಕ್ಲು ಠಾಣೆಯಲ್ಲಿ ದಾಖಲಾಗಿದ್ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ ಮಡಿಕೇರಿ ಗ್ರಾಮಾಂತರ ಠಾಣೆಯ ಸಿಪಿಐ ಅನೂಪ್ ಮಾದಪ್ಪ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹೊಸಮನಿ ಪುಂಡಲೀಕ ಆರೋಪಿಗಳಿಗೆ ಮೂರು ವರ್ಷದ ಕಠಿಣ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕೆ.ಜಿ.ಅಶ್ವಿನಿ ಅವರು ವಾದಿಸಿದರು.