October 6, 2026
Tuesday, October 6, 2026
spot_img

ಜಿಮ್‌ ಟ್ರೈನರ್‌ ನಂದನ್‌ ಕೊಲೆ ತನಿಖೆ ಚುರುಕು: ಸಲಿಂಗಕಾಮ, ಅತಿಯಾದ ಡ್ರಗ್ಸ್‌ ಸೇವನೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಅಮೃತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಜಿಮ್‌ ಟ್ರೈನರ್‌ ನಂದನ್‌ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಜಿಮ್‌ ಆನಿವರ್ಸರಿ ನಂತರ ಪರಿಚಿತರೊಬ್ಬರ ಅಪಾರ್ಟ್‌ಮೆಂಟ್‌ಗೆ ನಂದನ್‌ ತೆರಳಿದ್ದರು. ರಾತ್ರಿ ಅಲ್ಲಿಗೆ ಹೋಗಿದ್ದ ನಂದನ್‌ ಬೆಳಗ್ಗೆ ಹೆಣವಾಗಿದ್ದರು. ರಾತ್ರಿ ಏನೆಲ್ಲಾ ಆಗಿತ್ತು ಎನ್ನುವ ಬಗ್ಗೆ ಕೆಲ ಮಾಹಿತಿಗಳು ಲಭ್ಯವಾಗಿವೆ. ಪಾರ್ಟಿ ನೆಪದಲ್ಲಿ ಸಲಿಂಗಕಾಮ, ಅತಿಯಾದ ಡ್ರಗ್ಸ್‌ ಸೇವನೆ ಹಾಗೂ ಮಾರಣಾಂತಿಕ ಹಲ್ಲೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಅನುಷ್‌ ಶೆಟ್ಟಿ ಎಂಬಾತ ನಂದನ್‌ ಬಳಿ ಪರ್ಸನಲ್‌ ಟ್ರೈನಿಂಗ್‌ ತೆಗೆದುಕೊಳ್ಳುತ್ತಿದ್ದ. ಜಿಮ್‌ ಆನಿವರ್ಸರಿ ಪಾರ್ಟಿ ಹೆಸರಿನಲ್ಲಿ ಕೆಂಪಾಪುರದಲ್ಲಿರುವ ತನ್ನ ಫ್ಲಾಟ್‌ಗೆ ಅನುಷ್‌ ನಂದನ್‌ರನ್ನು ಕರೆದುಕೊಂಡು ಹೋಗಿದ್ದ. ನಂದನ್‌ ಜೊತೆ ಇನ್ನೂ ನಾಲ್ವರು ಟ್ರೈನರ್‌ಗಳನ್ನೂ ಪಾರ್ಟಿಗೆ ಕರೆಯಲಾಗಿತ್ತು. ಪಾರ್ಟಿ ವೇಳೆ ಎಲ್ಲರೂ ಭಾರೀ ಪ್ರಮಾಣದ ಡ್ರಗ್ಸ್‌ ಹಾಗೂ ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ. ಪೊಲೀಸರು ಸ್ಥಳ ಪರಿಶಿಲನೆ ಮಾಡಿದ ವೇಳೆ ಡ್ರಗ್ಸ್‌ ಸಂಬಂಧಿತ ವಸ್ತುಗಳು ಸಿಕ್ಕಿವೆ.

ಮೈಯೆಲ್ಲಾ ಕಚ್ಚಿದ ಗುರುತು

ಇನ್ನು ಪಾರ್ಟಿಯಲ್ಲಿದ್ದ ಐವರು ಸಲಿಂಗ ಕಾಮ ನಡೆಸಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ ನಶೆಯಲ್ಲಿದ್ದ ವಿಶ್ವನಾಥ್‌ ಎಂಬಾತ ನಂದನ್‌ಗೆ ಕಿಸ್‌ ಮಾಡಿದ್ದಾನೆ. ನಂತರ ಇನ್ನೂ ಮೂವರು ಲೈಂಗಿಕ ದೌರ್ಜನ್ಯ ಎಸಗಲು ಸೇರಿದ್ದಾರೆ. ನಂದನ್‌ ವಿರೋಧಿಸಿದಾಗ ಹಲ್ಲೆ ನಡೆದಿದೆ ಎನ್ನಲಾಗಿದೆ. ನಂದನ್‌ ಮೃತದೇಹದ ಮೇಲೆ ಕಚ್ಚಿರುವ ಗುರುತುಗಳಿವೆ. ಜಗಳವಾಗಿದ್ದರೆ ಹೊಡೆತದ ಗುರುರುಗಳು ಇರಬೇಕಿತ್ತು. ಆದರೆ ದೇಹದ ಅಲ್ಲಲ್ಲಿ ಕಚ್ಚಿದ ಗುರುತುಗಳಿವೆ. ಇದು ಲೈಂಗಿಕ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ. ಇದನ್ನು ನಂದನ್‌ ವಿರೋಧಿಸಿದ ವೇಳೆ ಜಗಳ ವಿಕೋಪಕ್ಕೆ ತಿರುಗಿ ಭಾರವಾದ ವಸ್ತುವಿನಿಂದ ನಂದನ್‌ ತಲೆಗೆ ಹೊಡೆಯಲಾಗಿದೆ ಎಂದು ಶಂಕಿಸಲಾಗಿದೆ.

ಅನುಷ್‌ ಶೆಟ್ಟಿ ಹೇಳಿದ್ದೇನು?

ಅನುಷ್‌ ಶೆಟ್ಟಿ ತಾನು ಪಾರ್ಟಿ ಆರ್ಗನೈಸ್‌ ಮಾಡಿದ್ದು ನಿಜ. ಆದರೆ ತುಂಬಾ ಸುಸ್ತಾಗಿದ್ದ ಕಾರಣ ನಾನು ನನ್ನ ರೂಮಿಗೆ ಹೋಗಿ ಮಲಗಿದ್ದೆ. ಈ ನಾಲ್ವರು ಮನೆಯಲ್ಲಿ ಏನು ಮಾಡಿದರೋ ನನಗೆ ಗೊತ್ತಿಲ್ಲ. ರಾತ್ರಿ ಗಾಢ ನಿದ್ದೆಯಲ್ಲಿದ್ದೆ. ಬೆಳಗ್ಗೆ ಎದ್ದು ನೋಡಿದಾಗ ನಂದನ್‌ ತಲೆಯಿಂದ ರಕ್ತ ಬರುತ್ತಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದೆ ಎಂದು ಹೇಳಿದ್ದಾರೆ. ಮನೆಯಲ್ಲಿ ಲೈಂಗಿಕ ದೌರ್ಜನ್ಯ, ಜಗಳ, ಗಲಾಟೆ, ಹಲ್ಲೆ ಎಲ್ಲವೂ ನಡೆದರೂ ರೂಮಿನಲ್ಲಿದ್ದ ಅನುಷ್‌ಗೆ ಗೊತ್ತಾಗಿಯೇ ಇಲ್ಲ ಎನ್ನುವುದನ್ನು ನಂಬೋದು ಪೊಲೀಸರಿಗೆ ಕಷ್ಟವಾಗಿದೆ. ಪೋಸ್ಟ್‌ ಮಾರ್ಟಮ್‌ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಮನೆಯಲ್ಲಿದ್ದ ನಾಲ್ವರನ್ನು ಗಂಭೀರ ಸ್ವರೂಪದ ವಿಚಾರಣೆಗೆ ಗುರಿ ಮಾಡಲಾಗಿದೆ.

Must Read