ಹೂಡಿಕೆ ಸಮಾವೇಶ: ಮೊದಲ ದಿನವೇ ಹರಿದು ಬಂತು 3.61 ಲಕ್ಷ ಕೋಟಿ ರೂ.!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಕರ್ನಾಟಕ ಹಲವು ಕ್ಷೇತ್ರದಲ್ಲಿ ನಂಬರ್ ಒನ್ ಆಗಿದ್ದು, ಹೂಡಿಕೆಗೆ ಪೂರಕ ರಾಜ್ಯವಾಗಿದೆ.ಇಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಬೆಂಗಳೂರು ನಗರದ ಅರಮನೆ ಆವರಣದಲ್ಲಿ ಬುಧವಾರದಿಂದ ಆರಂಭವಾದ ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್, ಉಕ್ರೇನ್ ಯುದ್ದದ ಸಮಯದಲ್ಲಿ ಪ್ರಧಾನಿ ಮೋದಿ ದೇಶದ ಆರ್ಥಿಕತೆಯನ್ನು ಸೂಕ್ಷ್ಮವಾಗಿ ಮುನ್ನಡೆಸಿದ್ದಾರೆ. ಎಂಎಸ್‌ಎಂಇ ಮತ್ತು ಎಸ್‌ಇಜೆಡ್ ವಲಯಗಳಲ್ಲಿ ಪೂರಕವಾಗುವಂತೆ ಕ್ರಮ‌ ತೆಗೆದುಕೊಂಡಿದ್ದಾರೆ ಎಂದರು.

ಭಾರತದ ಬಗ್ಗೆ ವಿದೇಶದಲ್ಲಿ ಉತ್ತಮ ಅಭಿಪ್ರಾಯವಿದೆ. ಭಾರತ ಆರ್ಥಿಕ ಸಾಮರ್ಥ್ಯ, ಸಫಲತೆಯನ್ನು ಕಂಡಿದೆ‌ ಎಂಬ ಅಭಿಪ್ರಾಯ ವಿದೇಶದಲ್ಲಿದೆ. ಕರ್ನಾಟಕ ಕೂಡ ಭಾರತದ ನೀತಿ ನಿಯಮಗಳನ್ನು ಸರಿಯಾಗಿ ಅನುಷ್ಠಾನ ಮಾಡುವ ಮೂಲಕ ಆರ್ಥಿಕ ಶಿಸ್ತನ್ನು ಸಾಧಿಸಿದೆ ಎಂದರು.

ಐದು ಲಕ್ಷ ಕೋಟಿ ಗುರಿ ಇರಿಸಿಕೊಂಡು ಹೂಡಿಕೆದಾರರ ಸಮಾವೇಶಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ, ಇಂದೇ 2.8 ಲಕ್ಷ ಕೋಟಿ ಹೂಡಿಕೆಗೆ ಒಡಂಬಡಿಕೆ ಆಗಿದೆ. ಮೊದಲ ದಿನದ ಸಮಾವೇಶದಲ್ಲೇ ಶೇ.50ಕ್ಕಿಂತ ಹೆಚ್ಚು ಒಡಂಬಡಿಕೆ ಕ್ಲಿಯರೆನ್ಸ್ ಪಡೆದುಕೊಂಡಿದೆ ಗ್ರೀನ್ ಅಮೋನಿಯಾ, ಇಂಡಸ್ಟ್ರಿಯಲ್ ಕಾರಿಡಾರ್, ಬಂದರು ನಿರ್ಮಾಣ ಕ್ಷೇತ್ರಗಳಲ್ಲಿ ಕರ್ನಾಟಕ ವೇಗಗತಿಯಲ್ಲಿ ಕೆಲಸ‌ ಮಾಡುತ್ತಿದೆ ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಐಟಿ ರಫ್ತು, ಎಲೆಕ್ಟ್ರಾನಿಕ್ ಡಿಸೈನ್ಸ್, ಆರ್ ಅಂಡ್​ ಡಿ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಉದ್ಯೋಗ ಸೃಷ್ಠಿಯಲ್ಲಿ ಭಾರತದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಕರ್ನಾಟಕದ ಯುವ ಪ್ರತಿಭೆಗಳು ಸಾಕಷ್ಟು ಸಾಮರ್ಥ್ಯ ಹೊಂದಿದ್ದಾರೆ. ದೇಶದ ಶೇ.10ರಷ್ಟು ಉದ್ಯೋಗ ಕರ್ನಾಟಕದಲ್ಲಿ ಸೃಷ್ಟಿಯಾಗುತ್ತಿದೆ. ಅಮೃತಕಾಲದ ಸಮಯದಲ್ಲಿ ಕರ್ನಾಟಕ ಭಾರತದ ಅತಿದೊಡ್ಡ ಅಡಿಪಾಯವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಮೊದಲ ದಿನ 3.61 ಲಕ್ಷ ಕೋಟಿ ರೂ. ಹೂಡಿಕೆಗೆ ಒಡಂಬಡಿಕೆ
‘ಇನ್ವೆಸ್ಟ್ ಕರ್ನಾಟಕ 2022 (Invest Karnataka 2022)’ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಮೊದಲ ದಿನವಾದ ಬುಧವಾರ 3.61 ಲಕ್ಷ ಕೋಟಿ ರೂ. ಹೂಡಿಕೆಗೆ ಒಡಂಬಡಿಕೆ ಏರ್ಪಟ್ಟಿದೆ. ಗ್ರೀನ್ ಹೈಡ್ರೋಜನ್, ಗ್ರೀನ್ ಅಮೋನಿಯಂ, ಸೌರಶಕ್ತಿ, ಇಂಧನ ಕ್ಷೇತ್ರ, ಸೆಮಿಕಂಡಕ್ಟರ್ ವಲಯ, ಎಲೆಕ್ಟ್ರಾನಿಕ್ಸ್ ಹಾಗೂ ಉತ್ಪಾದನಾ ವಲಯಗಳ ಕೈಗಾರಿಕೋದ್ಯಮಿಗಳು ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಮೂಲಸೌಕರ್ಯ, ಕೈಗಾರಿಕೆ, ಲಾಜಿಸ್ಟಿಕ್ ವಲಯಗಳಲ್ಲಿ ಒಟ್ಟು 43,500 ಕೋಟಿ ರೂ. ಹೂಡಿಕೆಯ ಒಪ್ಪಂದಗಳು ಏರ್ಪಟ್ಟಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!