ಹೊಸದಿಗಂತ ವರದಿ ಉತ್ತರ ಕನ್ನಡ:
ಫೇಸ್ಬುಕ್ ಒಂದರಲ್ಲಿ ಬಂದ ಹಣ ಹೂಡಿಕೆ ಕಂಪನಿಯ ಮಾತಿಗೆ ನಂಬಿ ದಾಂಡೇಲಿಯ ಸಾಯಿನಗರದ ನೌಕಾ ಸೇನೆಯ ನಿವೃತ್ತ ಅಧಿಕಾರಿಯೋರ್ವರು 10 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗಾಂಧಿನಗರದ ದಿವಾಕರ್ ನಾರಾಯಣ್ ಎಂಬವರೇ ಸೈಬರ್ ವಂಚನೆಯಲ್ಲಿ ಹಣ ಕಳೆದುಕೊಂಡವರಾಗಿದ್ದಾರೆ.
ಇವರು ನೌಕಾಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದು, ಈಗ ದಾಂಡೇಲಿಯ ಸಾಯಿ ನಗರದಲ್ಲಿ ತಮ್ಮ ಪತ್ನಿಯೊಂದಿಗೆ
ವಾಸವಾಗಿದ್ದರು. ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ ಪತ್ನಿಯೊಂದಿಗೆ ಜಂಟಿ ಖಾತೆ
ಇದ್ದು, 2025 ರಲ್ಲಿ ದಿವಾಕರ ಅವರ ಪತ್ನಿ ಫೇಸ್ಟುಕ್ ಬಳಸುವಾಗ “ಹಣ ಹೂಡಿಕೆ ಮಾಡಿ ಹೆಚ್ಚಿನ
ಲಾಭವನ್ನು ಡಾಲರ್ ರೂಪದಲ್ಲಿ ಪಡೆಯಿರಿ” ಎಂದು ಹೇಳಿ, ಇದು ಸರ್ಕಾರಿ ಯೋಜನೆ ಎಂದು ತೋರಿಸಿದ ಜಾಹೀರಾತನ್ನು ನೋಡಿ ಅದನ್ನು ಕ್ಲಿಕ್ ಮಾಡಿ, ಅಲ್ಲಿ ಕೇಳಿದ ಮಾಹಿತಿಯನ್ನು ನೀಡಿ ತಮ್ಮ ಸಂಪರ್ಕ ವಿವರಗಳನ್ನು ಹಂಚಿಕೊಂಡಿರುತ್ತಾರೆ.
ನಂತರ ಇವರ ಮೊಬೈಲ್ ಗೆ ವಿವಿಧ ಸಂಖ್ಯೆಗಳ ಮೂಲಕ ಕರೆಗಳು ಹಾಗೂ ವಾಟ್ಸಪ್ ಸಂದೇಶಗಳು ಬಂದಿದ್ದು, ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. “quantro-ai.com” ಎಂಬ ವೆಬಸೈಟ್ ತೆರೆಯಲಾಗಿದ್ದು, ಅದರಲ್ಲಿ ಅವರು ತಮ್ಮ ಮಾಹಿತಿಯನ್ನು ದಾಖಲಿಸಿದ್ದಾರೆ. ನಂತರ ಇವರು ನೀಡಿದ ಸಂಖ್ಯೆಗೆ ಬೇರೆ ಬೇರೆ ಸಂಖ್ಯೆಗಳ ಮೂಲಕ ಕರೆಗಳು ಹಾಗೂ ವಾಟ್ಸಪ್ ಸಂದೇಶಗಳು ಬಂದಿವೆ.
ಇದನ್ನೂ ಓದಿ:
ಪ್ರಾರಂಭದಲ್ಲಿ ರೂ. 3,10,000 ಮತ್ತು ರೂ.3,12,000 ರೂ.ಗಳನ್ನು ನೋಂದಣಿ ಶುಲ್ಕವಾಗಿ ಪಡೆದುಕೊಂಡಿದ್ದಾರೆ. ನಂತರ “quantro-ai.com” ವೆಡ್ಬ್ ಸೈಟಿನಲ್ಲಿ ನಕಲಿ ಲಾಭ ತೋರಿಸಿ ನಂಬಿಸಿದ ಅವರು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮತ್ತೆ ಕರೆ ಹಾಗೂ ವಾಟ್ಸಪ್ ಮೂಲಕ ಸಂಪರ್ಕಿಸಿ, ನಿಮ್ಮ ಹಣ ಡಾಲರ್ ನಲ್ಲಿ ಇದೆ, ಅದನ್ನು ಮರಳಿ ಪಡೆಯಲು ಶುಲ್ಕ ಪಾವತಿಸಬೇಕು ಎಂದು ನಂಬಿಸಿದ್ದಾರೆ. ಈ ಮಾತುಗಳನ್ನು ನಂಬಿದ ದಿವಾಕರ ದಂಪತಿಗಳು ಫೆಬ್ರವರಿಯಿಂದ ಏಪ್ರಿಲ್ ತಿಂಗಳವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 10,60,436 ರೂ. ಹಣ ವರ್ಗಾವಣೆ ಮಾಡಿದ್ದಾರೆ.
ಮುಂದೆ ತಾವು ಹೂಡಿಕೆ ಮಾಡಿದ ಹಣ ವಾಪಸು ಬಾರದಿರುವುದನ್ನು ಗಮನಿಸಿ, ಹಾಗೂ ಬ್ಯಾಂಕ್ ನಿಂದ ಬಂದ ಕರೆ ಮೂಲಕ ನೀವು ಕಳುಹಿಸಿದ ಹಣ ಸೈಬರ್ ಕ್ರೈಂ ಸಂಬಂಧಿತ ಖಾತೆಗೆ ಹೋಗಿದೆ ಎಂದು ತಿಳಿದ ನಂತರ ದಿವಾಕರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರ ಠಾಣೆಯ ಪಿ.ಎಸ್.ಐ ಕಿರಣ ಪಾಟೀಲ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.



