ಮಣಿಪುರ ಗಲಭೆಯಲ್ಲಿದೆಯಾ ವಿದೇಶಿ ಶಕ್ತಿಗಳ ಕೈವಾಡ? – ಮಾಜಿ ಸೇನಾ ಮುಖ್ಯಸ್ಥರು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಸಂಸ್ಥೆಗಳ ಕೈವಾಡವನ್ನು ತಳ್ಳಿಹಾಕುವಂತಿಲ್ಲ ಎಂದು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರಾವಣೆ ಹೇಳಿದ್ದಾರೆ. ಗಡಿ ರಾಜ್ಯಗಳಲ್ಲಿ ಅಸ್ಥಿರತೆ ರಾಷ್ಟ್ರೀಯ ಭದ್ರತೆಗೆ ಒಳ್ಳೆಯದಲ್ಲ ಎಂಬ ಆತಂಕ ಹೊರಹಾಕಿರುವ ನರಾವಣೆ, ಮಣಿಪುರ ಹಿಂಸಾಚಾರದಲ್ಲಿ ಅಲ್ಲಿನ ಬಂಡುಕೋರ ಗುಂಪುಗಳು ಚೀನಾದಿಂದ ನೆರವು ಪಡೆಯುತ್ತಿರುವ ಸಾಧ್ಯತೆಯನ್ನು ಒತ್ತಿ ಹೇಳಿದ್ದಾರೆ.

ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ನಡೆದ ರಾಷ್ಟ್ರೀಯ ಭದ್ರತಾ ದೃಷ್ಟಿಕೋನದ ಕಾರ್ಯಕ್ರಮದಲ್ಲಿ ಮಣಿಪುರದ ಹಿಂಸಾಚಾರದ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ನರಾವಣೆ ಉತ್ತರಿಸಿದರು. ಮಣಿಪುರ ಹಿಂಸಾಚಾರ ಸನ್ನಿವೇಶ ನಿಯಂತ್ರಣಕ್ಕೆ ಪೂರಕ ಕ್ರಮಗಳನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ತೆಗೆದುಕೊಳ್ಳುತ್ತಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, “ಮಣಿಪುರದ ಹಿಂಸಾಚಾರದಲ್ಲಿ ವಿದೇಶಿ ಸಂಘಟನೆಯ ಕೈವಾಡವನ್ನು ತಳ್ಳಿಹಾಕುವಂತಿಲ್ಲ. ಏಕೆಂದರೆ ಚೀನಾದಿಂದ ಮೊದಲಿನಿಂದಲೂ ಬಂಡುಕೋರ ಗುಂಪುಗಳಿಗೆ ಸಹಾಯ ಸಿಗುತ್ತ ಬಂದಿದ್ದು, ಅದು ಈಗಲೂ ಮುಂದುವರಿದುಕೊಂಡಿರುವುದನ್ನು ತಳ್ಳಿಹಾಕಲಾಗುವುದಿಲ್ಲ” ಎಂದಿದ್ದಾರೆ.

ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಮಾದಕ ವಸ್ತು ಸಾಗಾಟದ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಹಿಂದಿನಿಂದಲೂ ಮಾದಕ ದ್ರವ್ಯ ಸಾಗಾಟ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ವಶಪಡಿಸಿಕೊಂಡ ಡ್ರಗ್ಸ್ ಪ್ರಮಾಣ ಹೆಚ್ಚಾಗಿದೆ.‌ ಮಾದಕ ಜಾಲದ ವಿಷಯದಲ್ಲಿ ಗೋಲ್ಡನ್ ಟ್ರಯಾಂಗಲ್ ಎಂದೇ ಗುರುತಿಸಲಾಗುವ ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ಲಾವೋಸ್ ಗಡಿಗೆ ನಾವು ಹತ್ತಿರವಾಗಿದ್ದೇವೆ. ಮ್ಯಾನ್ಮಾರ್‌ನಲ್ಲಿ ಯಾವಾಗಲೂ ಅವ್ಯವಸ್ಥೆ, ಮಿಲಿಟರಿ ಆಡಳಿತವಿದೆ. ಈ ಮೊದಲು ಮಿಲಿಟರಿಯೇತರ ಆಡಳಿತವಿದ್ದಾಗಲೂ ಮಧ್ಯ ಥೈಲ್ಯಾಂಡ್ ಮೇಲಷ್ಟೇ ಅಲ್ಲಿನ ಸರ್ಕಾರಕ್ಕೆ ನಿಯಂತ್ರಣವಿತ್ತು. ಚೀನಾ ಮತ್ತು ಭಾರತದ ಗಡಿಭಾಗಗಳ ಪ್ರದೇಶಗಳ ಮೇಲೆ ಅಲ್ಲಿನ ಆಡಳಿತದ ನಿಯಂತ್ರಣ ಕಡಿಮೆ ಇರುವುದರಿಂದ ಮಾದಕ ವಸ್ತು ಸಾಗಣೆ ಮುಂದುವರಿದುಕೊಂಡುಬಂದಿದೆ” ಎಂದು ನಿವೃತ್ತ ಜನರಲ್ ನರಾವಣೆ ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!