ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಆಟೋ LPGಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಬಂಕ್ಗಳ ಮುಂದೆ ಉದ್ದ ಸಾಲುಗಳು ಕಾಣಿಸಿಕೊಳ್ಳುತ್ತಿರುವ ನಡುವೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮಹತ್ವದ ಕ್ರಮ ಕೈಗೊಂಡಿದೆ.
ರಾಜ್ಯದಾದ್ಯಂತ ಆಟೋ LPG ಪೂರೈಕೆಯನ್ನು ಹೆಚ್ಚಿಸಿರುವುದಾಗಿ ಕಂಪನಿ ತಿಳಿಸಿದ್ದು, ಜಾಗತಿಕ ಭೂರಾಜಕೀಯ ಉದ್ವಿಗ್ನತೆಯಿಂದ ಖಾಸಗಿ ಪೂರೈಕೆ ಸರಪಳಿಯಲ್ಲಿ ಉಂಟಾದ ವ್ಯತ್ಯಯವೇ ಈ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ಹೇಳಿದೆ.
ರಾಜ್ಯದಲ್ಲಿ ಒಟ್ಟು 72 ಆಟೋ LPG ಡಿಸ್ಪೆನ್ಸಿಂಗ್ ಸ್ಟೇಷನ್ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಇಂಡಿಯನ್ ಆಯಿಲ್ ಒಂದೇ 55 ಸ್ಟೇಷನ್ಗಳನ್ನು ನಿರ್ವಹಿಸುತ್ತಿದೆ. ಆದರೆ 300ಕ್ಕೂ ಹೆಚ್ಚು ಖಾಸಗಿ ಸ್ಟೇಷನ್ಗಳಲ್ಲಿ ಸುಮಾರು 80 ಶೇಕಡಾ ಬಂಕ್ಗಳು ಸ್ಥಗಿತಗೊಂಡಿರುವುದು ಅಥವಾ ಭಾಗಶಃ ಕಾರ್ಯನಿರ್ವಹಿಸುತ್ತಿರುವುದರಿಂದ ಸರಬರಾಜಿನಲ್ಲಿ ಒತ್ತಡ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಸರ್ಕಾರಿ ಬಂಕ್ಗಳ ಮುಂದೆ ಕಿಲೋಮೀಟರ್ಗಟ್ಟಲೆ ಆಟೋಗಳ ಸಾಲು ಕಾಣಿಸುತ್ತಿದೆ.
ಇದನ್ನೂ ಓದಿ:
ಬೆಲೆ ವ್ಯತ್ಯಾಸವೂ ಬೇಡಿಕೆಯನ್ನು ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಸರ್ಕಾರಿ ತೈಲ ಕಂಪನಿಗಳ ಬಂಕ್ಗಳಲ್ಲಿ ಆಟೋ LPG ಲೀಟರ್ಗೆ ₹89.52ಕ್ಕೆ ಲಭ್ಯವಾಗುತ್ತಿದ್ದರೆ, ಕೆಲವು ಖಾಸಗಿ ಸ್ಟೇಷನ್ಗಳಲ್ಲಿ ಇದು ₹99 ರಿಂದ ₹105ರವರೆಗೆ ಮಾರಾಟವಾಗುತ್ತಿದೆ. ಕಡಿಮೆ ದರದ ಕಾರಣ ಆಟೋ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಂಕ್ಗಳತ್ತ ಮುಖ ಮಾಡುತ್ತಿದ್ದಾರೆ.
ಈ ಸಂಕಷ್ಟದ ನಡುವೆಯೇ ಆಟೋ ಚಾಲಕರ ಸಂಘಗಳು ಪ್ರತಿಭಟನೆಗೆ ಮುಂದಾಗಿವೆ. ಇಂಧನ ಕೊರತೆಯಿಂದ ದಿನದ ಆದಾಯ ಕುಸಿದಿದ್ದು, ಇಎಂಐ, ಮನೆ ಬಾಡಿಗೆ ಹಾಗೂ ಮಕ್ಕಳ ಶಾಲಾ ಶುಲ್ಕ ಪಾವತಿಸುವುದೇ ಕಷ್ಟವಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ. ಸಮಸ್ಯೆ ತಕ್ಷಣ ಪರಿಹರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.



