ಇಂದಿನಿಂದ ಐಪಿಎಲ್‌ ಟಿ.20 ಕದನ ಶುರು; ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ- ಕೆಕೆಆರ್‌ ಮುಖಾಮುಖಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ʼಮನೋರಂಜನ್‌ ಕಾ ಬಾಪ್‌ʼ ಖ್ಯಾತಿಯ ಐಪಿಎಲ್‌ ಟಿ20 ಕ್ರಿಕೆಟ್ ಟೂರ್ನಿಯ 15ನೇ ಆವೃತ್ತಿಗೆ ಇಂದು ಮುಂಬೈನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಳೆದ ಬಾರಿಯ ರನ್ನರ್‌ ಅಪ್‌ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಶನಿವಾರ ಕಾದಾಡಲಿವೆ. ವಿಶೇಷವೆಂದರೆ ಎರಡೂ ತಂಡಗಳು ಹೊಸ ಕಪ್ತಾನರ ನಾಯಕತ್ವದಡಿ ಕಣಕ್ಕಿಳಿಯುತ್ತಿವೆ. ಎಂಎಸ್ ಧೋನಿ ಅವರಿಂದ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿಕೊಂಡಿರುವ ರವೀಂದ್ರ ಜಡೇಜಾ ಮೊದಲ ಪಂದ್ಯದಲ್ಲೇ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಲು ಎದುರು ನೋಡುತ್ತಿದ್ದರೆ, ಕಳೆದ ಆವೃತ್ತಿಯ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳಲು ಶ್ರೇಯಸ್‌ ಐಯ್ಯರ್‌ ನೇತೃತ್ವದ ಕೆಕೆಆರ್‌ ಸಜ್ಜಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣ ಇಂದಿನ ಹೈವೋಲ್ಟೇಜ್ ಕದನಕ್ಕೆ ಸಜ್ಜಾಗಿದೆ.
ಕಳೆದ ಆವೃತ್ತಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗ ಮೂರು ಪಂದ್ಯಗಳಲ್ಲೂ ಸಿಎಸ್‌ಕೆ ತಂಡವೇ ಗೆದ್ದಿತ್ತು. ಈ ಅಂಶ ಸಹಜವಾಗಿಯೇ ಸಿಎಸ್ಕೆ ಮನೋಬಲ ಹೆಚ್ಚಿಸಲಿದೆ. ಕಳೆದ ವರ್ಷ ಪ್ರಥಮಾರ್ಧದಲ್ಲಿ ಸಾಧಾರಣ ಪ್ರದರ್ಶನ ತೋರಿದ್ದ ಕೆಕೆಆರ್‌ ಬಳಿಕ ಯುಎಎಇಯಲ್ಲಿ ನಡೆದ ಟೂರ್ನಿಯ ದ್ವಿತಿಯಾರ್ಧದಲ್ಲಿ ಅಮೋಘ ಪ್ರದರ್ಶನ ತೋರಿ ಫೈನಲ್‌ ಗೇರಿದ ಸಾಧನೆ ಮಾಡಿತ್ತು. ಎರಡೂ ತಂಡಗಳಿಗೆ ಮೊದಲ ಪಂದ್ಯಕ್ಕೆ ವಿದೇಶಿ ಆಟಗಾರರ ಅಭ್ಯತೆ ತಲೆನೋವಾಗಿ ಪರಿಣಮಿಸಿದೆ.

ಕೆಕೆಆರ್‌ ಸಂಭಾವ್ಯ ತಂಡ: ವೆಂಕಟೇಶ್ ಅಯ್ಯರ್, ಶೆಲ್ಡಾನ್‌ ಜಾಕ್ಸನ್‌, ಶ್ರೇಯಸ್ ಅಯ್ಯರ್ (ಕ್ಯಾಪ್ಟನ್), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೀ), ಆಂಡ್ರೆ ರಸೆಲ್, ಸುನೀಲ್ ನರೈನ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್‌ ಯಾದವ್‌, ವರುಣ್ ಚಕ್ರವರ್ತಿ.

ಸಿಎಸ್ ಕೆ ಸಂಭಾವ್ಯ ತಂಡ: ಋತುರಾಜ್ ಗಾಯಕ್ವಾಡ್, ಡಿವೋನ್ ಕಾನ್‌ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ (ವಿಕೀ), ಶಿವಂ ದುಬೆ, ಮಿಚೆಲ್‌ ಸ್ಯಾಂಟನರ್‌, ಡ್ವೇನ್ ಬ್ರಾವೊ, ರಾಜವರ್ಧನ್‌ ಹಂಗಾರ್ಕರ್, ಆಡಂ ಮಿಲ್ನೆ.

ಮುಖಾಮುಖಿ: 26 ಪಂದ್ಯ, ಚೆನ್ನೈ ಸೂಪರ್ ಕಿಂಗ್ಸ್ 17 ಗೆಲುವು, ಕೋಲ್ಕತ ನೈಟ್‌ರೈಡರ್ಸ್‌ 8 ಗೆಲುವು, ರದ್ದು: 1
ಪಂದ್ಯದ ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ + ಹಾಟ್‌ ಸ್ಟಾರ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!