IPL 2022 | ಇಂದು ಸನ್‌ ರೈಸರ್ಸ್‌- ಲಖನೌ ಕದನ; ಗೆಲುವಿನ ಖಾತೆ ತೆರೆಯುವುದೇ ಕೇನ್‌ ಪಡೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ ನ 12ನೇ ಪಂದ್ಯದಲ್ಲಿ ಇಂದು ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ ಹಾಗೂ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್​ರೈಸರ್ಸ್​​ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಸಿಎಸ್ಕೆ ವಿರುದ್ಧ ದಾಖಲೆಯ ರನ್‌ ಚೇಸ್‌ ಮಾಡಿ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ರಾಹುಲ್‌ ಪಡೆ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ. ಆಡಿರುವ ಏಕೈಕ ಪಂದ್ಯದಲ್ಲಿ ರಾಜಸ್ಥಾನ ಸೋಲುಂಡಿರುವ ಸನ್‌ ರೈಸರ್ಸ್‌ ಗಲುವಿನ ಖಾತೆ ತೆರೆಯುವ ತವಕದಲ್ಲಿದೆ.
ಮುಂಬೈನ ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​ ಅಕಾಡೆಮಿಯಲ್ಲಿ ಪಂದ್ಯ ಆಯೋಜನೆಯಾಗಿದ್ದು, ಈ ಪಂದ್ಯ ಲಖನೌ ಬ್ಯಾಟಿಂಗ್‌ ವರ್ಸಸ್‌ ಹೈದರಾಬಾದ್‌ ಬೌಲಿಂಗ್‌ ನಡುವಿನ ಹಣಾಹಣಿಯೆಂದು ಬಿಂಬಿತವಾಗಿದೆ. ಹೈದರಾಬಾದ್​ಗೆ ಹೋಲಿಸಿದರೆ ಲಖನೌ ತಂಡ ಬ್ಯಾಟಿಂಗ್‌ ನಲ್ಲಿ ಬಲಿಷ್ಠವಾಗಿದೆ. ಎಸ್​ಆರ್​​ಹೆಚ್ ಪಂದ್ಯದ ಗತಿ ತಿರುಗಿಸಬಲ್ಲ ಘಾತಕ ವೇಗಿಗಳನ್ನು ಹೊಂದಿದೆ.
ಕಳೆದ ಪಂದ್ಯದಲ್ಲಿ ವೇಗಿ ಭುವನೇಶ್ವರ್ ಕುಮಾರ್, ರೊಮಾರಿಯೊ ಶೆರ್ಡ್, ಉಮ್ರಾನ್ ಮಲಿಕ್, ಟಿ.ನಟರಾಜನ್, ವಾಷಿಂಗ್ಟನ್ ಸುಂದರ್ ಒಳಗೊಂಡ ಬೌಲಿಂಗ್‌ ವಿಭಾಗ ಖ್ಯಾತಿಗೆ ತಕ್ಕ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾಗಿತ್ತು. ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ್ ರಾಯಲ್ಸ್ 210 ರನ್‌ ಗಳ ಬೃಹತ್‌ ಮೊತ್ತ ಕಲೆಹಾಕಿತ್ತು. ಎಸ್‌ ಆರ್‌ ಹೆಚ್‌ ಬ್ಯಾಟಿಂಗ್‌ ಸಹ ಮಂಕಾದ ಪರಿಣಾಮ ತಂಡ 64 ರನ್‌ ಗಳ ಹೀನಾಯ ಸೋಲು ಕಂಡಿತ್ತು. ಇಂದು ಗೆಲುವಿನ ಸಿಹಿ ಕಾಣಬೇಕಿದ್ದಲ್ಲಿ ನಾಯಕ ಕೇನ್‌ ವಿಲಿಯಮ್ಸನ್‌, ಅಭಿಷೇಕ್‌ ಶರ್ಮ, ರಾಹುಲ್‌ ತ್ರಿಪಾಠಿ, ನಿಕೋಲಸ್‌ ಪೂರನ್ ಅವರಿರುವ ಬ್ಯಾಟಿಂಗ್‌ ವಿಭಾಗ ಮಿಂಚಲೇ ಬೇಕಿದೆ. ಬೌಲಿಂಗ್ ವಿಭಾಗವು ಸಂಘಟಿತವಾಗಿ ಹೋರಾಡಬೇಕಿದೆ.
ಲಖನೌ ಪಡೆ ಚೆನ್ನೈ ವಿರುದ್ಧದ ಅಮೋಘ ಗೆಲುವಿನ ನಂತರ ಭರ್ತಿ ಆತ್ಮವಿಶ್ವಾಸದಲ್ಲಿದೆ. ನಾಯಕ ಕೆಎಲ್ ರಾಹುಲ್, ಕ್ವಿಂಟನ್ ಡಿಕಾಕ್, ಎವಿನ್ ಲೂಯಿಸ್, ಹೂಡಾ ಮತ್ತು ಆಯುಷ್ ಬದೋನಿ ಕಳೆದ ಪಂದ್ಯದಲ್ಲಿ ಮಿಂಚಿದ್ದಾರೆ. ಕನ್ನಡಿಗ ಮನೀಷ್ ಪಾಂಡೆ ಫಾರ್ಮ್‌ ಗೆ ಮರಳಬೇಕಿದೆ. ಜೇಸನ್ ಹೋಲ್ಡರ್ ಸೇರ್ಪಡೆ ತಂಡವನ್ನು ಮತ್ತಷ್ಟು ಬಲಿಷ್ಠವಾಗಿಸಲಿದೆ. ಲಖನೌದ ಬೌಲಿಂಗ್‌ ಪಡೆ ಅತ್ಯಂತ ದುರ್ಬಲ ಪ್ರದರ್ಶನ ನೀಡುತ್ತಿದೆ. ರವಿ ಬಿಷ್ಣೋಯಿ ಹೊರತುಪಡಿಸಿದರೆ ಉಳಿದೆಲ್ಲಾ ಬೌಲರ್‌ ಗಳು ದುಬಾರಿಯಾಗುತ್ತಿದ್ದಾರೆ. ಆವೇಶ್‌ ಖಾನ್‌, ದುಷ್ಮಂತ ಚಮೀರ, ಕೃಣಾಲ್‌ ಪಾಂಡ್ಯ, ಆ್ಯಂಡ್ರೊ ಟೈ ಭಾರೀ ದಂಡನೆಗೆ ಒಳಗಾಗುತ್ತಿರುವುದು ತಂಡದ ಮ್ಯಾನೇಜ್‌ ಮೆಂಟ್‌ ಗೆ ತಲೆನೋವಾಗಿ ಪರಿಣಮಿಸಿದೆ.
ಲಖನೌ ಪ್ಲೇಯಿಂಗ್ XI(ಸಂಭಾವ್ಯ) : ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಎವಿನ್ ಲೂಯಿಸ್, ಮನೀಶ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬದೌನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್.

ಎಸ್​ಆರ್​​ಹೆಚ್ ಪ್ಲೇಯಿಂಗ್ XI (ಸಂಭಾವ್ಯ) : ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಏಡೆನ್ ಮರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮಾರಿಯಾ ಶೆಫರ್ಡ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಕಾರ್ತಿಕ್‌ ತ್ಯಾಗಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!