ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಈವರೆಗೆ ಐಪಿಎಲ್ ಪ್ರಶಸ್ತಿ ಒಲಿದಿಲ್ಲ. ಆದರೆ ಈ ವಾಸ್ತವದ ಹೊರತಾಗಿಯೂ, ರೆಡ್ ಆರ್ಮಿ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಐಪಿಎಲ್ 2022 ರಲ್ಲಿ ಆರ್ಸಿಬಿ ಪ್ರದರ್ಶನ ಅತ್ಯತ್ತಮವಾಗಿತ್ತು, ಅದಾಗ್ಯೂ ತಂಡ 3 ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಈ ಬಾರಿ ಆರ್ಸಿಬಿ ಪ್ರಾಂಚೈಸಿ ಕಪ್ ಗೆಲ್ಲುವ ನಿಟ್ಟಿನಲ್ಲಿ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿದೆ. ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲು ಸಜ್ಜಾಗಿದೆ. ತಂಡದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ ವೆಲ್ ಸ್ಥಾನ ಭದ್ರವಾಗಿದೆ. ಆದರೆ ಕಳೆದ ಬಾರಿ ಕಳಪೆ ಪ್ರದರ್ಶನ ತೋರಿದ ಮೂವರು ಆಟಗಾರರನ್ನು ತಂಡದಿಂದ ಕೈಬಿಟ್ಟು, ಆ ಸ್ಥಾನದಲ್ಲಿ ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಿದ್ಧತೆ ನಡೆಸಿದೆ.
RCB ಬಿಡುಗಡೆ ಮಾಡಲಿರುವ ಮೂವರು ಆಟಗಾರರು:
1. ಅನುಜ್ ರಾವತ್
ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್ ಅನುಜ್ ರಾವತ್‌ಗೆ ಆರ್ಸಿಬಿ ದೊಡ್ಡ ಮೊತ್ತದ ಹಣವನ್ನು ನೀಡಿ ಖರೀದಿಸಿತ್ತು. ಯುವ ಆಟಗಾರನಿಗೆ ಬರೋಬ್ಬರಿ 3.4 ಕೋಟಿ ನೀಡಿದ್ದು ಕ್ರಿಕೆಟ್ ಪಂಡಿತರ ಹುಬ್ಬೇರುವಂತೆ ಮಾಡಿತ್ತು. ಆದರೆ ಒಪನರ್ ಆಗಿ ಎಡಗೈ ಆಟಗಾರರನ್ನು ಆಡಿಸುವ ತಂಡದ ಯೋಜನೆ ಸ್ಪಷ್ಟವಾಗಿತ್ತು. ಅದರಂತೆ ರಾವತ್, ಟೂರ್ನಿಯನ್ನು ಉತ್ತಮವಾಗಿ ಆರಂಭಿಸಿದರೂ ಸಹ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ರಾವತ್ 8 ಪಂದ್ಯಗಳಲ್ಲಿ 16.13 ರ ನೀರಸ ಸರಾಸರಿಯಲ್ಲಿ ಕೇವಲ 129 ರನ್ ಗಳಿಸುವಲ್ಲಿ ಮಾತ್ರ ಶಕ್ತರಾಗಿದ್ದರು. ಆದ್ದರಿಂದ ಈ ಬಾರಿ ರಾವತ್ ರನ್ನು ಕೈಬಿಡಲು ಪ್ರಾಂಚೈಸಿ ಯೋಚಿಸುತ್ತಿದೆ ಎಂಬ ಮಾಹಿತಿಯಿದೆ.
2.ಕರ್ಣ್ ಶರ್ಮಾ
ಐಪಿಎಲ್ 2023 ರ ಹರಾಜಿನ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಬಹುದಾದ ಆಟಗಾರರಲ್ಲಿ ಕರ್ಣ್ ಶರ್ಮಾ ಕೂಡ ಒಬ್ಬರು. ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗಾ ಗೆ ಬ್ಯಾಕಪ್ ಲೆಗ್ ಸ್ಪಿನ್ನರ್ ಆಗಿ ಫ್ರಾಂಚೈಸಿ ಕರ್ಣ್ ಶರ್ಮಾ ಅವರನ್ನು ಆಯ್ಕೆ ಮಾಡಿತ್ತು. ಆದಾಗ್ಯೂ, ಕರ್ಣ್ ಶರ್ಮಾಗೆ ಆಡುವ ಅವಕಾಶ ಲಭಿಸಿರಲಿಲ್ಲ. ಹಸರಂಗ ಅಸ್ಥಿರತೆ ಬಗ್ಗೆ ಪ್ರಾಂಚೈಸಿಗೆ ಸಣ್ಣಮಟ್ಟದ ಚಿಂತೆ ಇದೆ. ಅವರು ಎಂ ಚಿನ್ನಸ್ವಾಮಿಯಂತಹ ಸಣ್ಣ ಕ್ರೀಡಾಂಗಣದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬುದು ಖಚಿತವಿಲ್ಲ. ಆದ್ದರಿಂದ, ತಂಡವು ಹಸರಂಗ ಬ್ಯಾಕ್‌ಅಪ್‌ಗೆ ಯುವ ಹಾಗೂ ಹೆಚ್ಚು ಸೂಕ್ತವಾದ ಆಯ್ಕೆಯನ್ನು ಹುಡುಕುತ್ತಿದೆ, ಆದ್ದರಿಂದ ಕರ್ಣ್ ಶರ್ಮಾ ಅವರ ಬಿಡುಗಡೆ ನಿಶ್ಚಿತ.
3. ಶೆರ್ಫೇನ್ ರುದರ್ಫೋರ್ಡ್
ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಗಳು ತಮ್ಮ ಸ್ಫೋಟಕ ಆಟಕ್ಕೆ ಹೆಸರುವಾಸಿ. ಶೆರ್ಫೇನ್ ರುದರ್‌ಫೋರ್ಡ್ ಇದಕ್ಕೆ ಹೊರತಾಗಿಲ್ಲ. ಎಡಗೈ ಬ್ಯಾಟರ್ ದೊಡ್ಡ ಸಿಕ್ಸರ್‌ಗಳನ್ನು ಸಿಡಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಅವರನ್ನು ಐಪಿಎಲ್ IPL 2022 ರ ಮೆಗಾ ಹರಾಜಿನಲ್ಲಿ RCB 1 ಕೋಟಿ ರೂ. ನೀಡಿ ಖರೀದಿಸಿತ್ತು. ಆದಾಗ್ಯೂ, ಅವರು ಐಪಿಎಲ್ 2022 ರಲ್ಲಿ 3 ಪಂದ್ಯಗಳನ್ನಾಡಿ ಕೇವಲ 33 ರನ್ ಗಳಿಸಿದ್ದಾರೆ. ಜೊತೆಗೆ ಅಪಾರ ಅಭಿಮಾನಿಗಳ ನಿರೀಕ್ಷೆಗಳನ್ನು ಪೂರೈಸಲು ವಿಫಲರಾದರು. ಆದ್ದರಿಂದ ಶೆರ್ಫೇನ್ ಬದಲಿಗೆ ಬಲಿಷ್ಠ ಆಟಗಾರರನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ