ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ ತಂಡವು ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ತನ್ನ ತವರಿನಲ್ಲೇ ಸೋಲಿನ ಆಘಾತ ಅನುಭವಿಸಿದೆ. ನಿಕೋಲಸ್ ಪೂರನ್ ಬೆಂಕಿ ಬ್ಯಾಟಿಂಗ್‌ಗೆ ಸನ್‌ರೈಸರ್ಸ್ ಬೋಲ್ಡ್ ಆಗಿದೆ. ಹೈದರಾಬಾದ್ ವಿರುದ್ಧ ಲಕ್ನೋ 5 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್ ಗೆದ್ದ ಲಕ್ನೋ ನಾಯಕ ರಿಷಭ್ ಪಂತ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರಂಭದಲ್ಲೇ ಹೈದರಾಬಾದ್ ತಂಡ 300 ರನ್ ಗಳಿಸಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಶಾರ್ದೂಲ್ ಠಾಕೂರ್ ಇದಕ್ಕೆ ಅವಕಾಶ ನೀಡಲಿಲ್ಲ. ಶಾರ್ದೂಲ್ ತಮ್ಮ ಎರಡನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಮತ್ತು ನಂತರ ಇಶಾನ್ ಕಿಶನ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಲಕ್ನೋ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಆದಾಗ್ಯೂ, ಟ್ರಾವಿಸ್ ಹೆಡ್ ಎಂದಿನಂತೆ ಆಟದ ಮೂಲಕ ಪವರ್‌ಪ್ಲೇನಲ್ಲಿ 62 ರನ್‌ಗಳನ್ನು ಕಲೆಹಾಕಿದರು. ಹೆಡ್ ಔಟಾದ ನಂತರ ಎಲ್ಲವೂ ಬದಲಾಯಿತು. 47 ರನ್ ಗಳಿಸಿ ಹೆಡ್ ಪ್ರಿನ್ಸ್ ಯಾದವ್ ಬೌಲಿಂಗ್ ನಲ್ಲಿ ಔಟಾದ ನಂತರ ಹೈದರಾಬಾದ್ ತಂಡ ಆಘಾತಕ್ಕೊಳಗಾಯಿತು. ನಿತೀಶ್ ಕುಮಾರ್ ರೆಡ್ಡಿ 32 ರನ್ ಗಳಿಸಿ ಔಟಾದರೆ, ದುರದೃಷ್ಟವಶಾತ್ ಕ್ಲಾಸೆನ್ 26 ರನ್ ಗಳಿಸಿ ರನೌಟ್ ಆದರು. ಅನಿಕೇತ್ ವರ್ಮಾ 13 ಎಸೆತಗಳಲ್ಲಿ 5 ಸಿಕ್ಸರ್‌ಗಳ ಸಹಾಯದಿಂದ 36 ರನ್ ಗಳಿಸಿದರು. ಇವರ ಆಟದಿಂದಾಗಿ ಹೈದರಾಬಾದ್ ತಂಡವು 190 ರನ್ ಮಾತ್ರ ಕಲೆಹಾಕಲು ಸಾಧ್ಯವಾಯಿತು.