April 2, 2026
Thursday, April 2, 2026
spot_img

ಇನ್ನೂ ಬಂದಿಲ್ಲ IPL ವೇಳಾಪಟ್ಟಿ: ಇಷ್ಟು ಲೇಟ್ ಯಾಕಾಗ್ತಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಟೂರ್ನಿ ಆರಂಭಕ್ಕೆ ದಿನಗಳು ಸಮೀಪಿಸುತ್ತಿದ್ದರೂ ಕೆಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಪಂದ್ಯಗಳ ದಿನಾಂಕ ಮತ್ತು ಸ್ಥಳ ನಿಗದಿಯಲ್ಲಿ ವಿಳಂಬ ಉಂಟಾಗಿದೆ.

ಮಾಹಿತಿಯ ಪ್ರಕಾರ ಐಪಿಎಲ್‌ನ 19ನೇ ಸೀಸನ್ ಮಾರ್ಚ್ 28ರಿಂದ ಆರಂಭವಾಗುವ ಸಾಧ್ಯತೆ ಇದೆ. ಆದರೆ ಮೊದಲ ಹಂತದಲ್ಲಿ ಕೇವಲ 15 ದಿನಗಳ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ನಂತರ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳ ಚುನಾವಣಾ ದಿನಾಂಕಗಳು ಅಂತಿಮವಾದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಚುನಾವಣಾ ಸಮಯದಲ್ಲಿ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಮತದಾನ ಕಾರ್ಯದಲ್ಲಿ ನಿರತರಾಗಿರುವುದರಿಂದ ಪಂದ್ಯಗಳಿಗೆ ಅಗತ್ಯ ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ. ಇದೇ ಕಾರಣದಿಂದ ಸಂಪೂರ್ಣ ವೇಳಾಪಟ್ಟಿಯನ್ನು ಒಂದೇ ಬಾರಿ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ಈ ಹಿಂದೆ 2019 ಮತ್ತು 2024ರಲ್ಲೂ ಚುನಾವಣೆಯ ಹಿನ್ನೆಲೆ ಐಪಿಎಲ್ ವೇಳಾಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗಿತ್ತು. ಈ ಬಾರಿ ಕೂಡ ಅದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ.

ಇದೀಗ ಲಭ್ಯ ಮಾಹಿತಿಯ ಪ್ರಕಾರ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ಫೈನಲ್ ಪಂದ್ಯ ಮೇ 31ರಂದು ಇದೇ ಮೈದಾನದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !