ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮೂವರನ್ನು ಇರಾನ್ ಗಲ್ಲಿಗೇರಿಸಿದೆ .
ಗಲ್ಲಿಗೇರಿಸಲಾದ ಮೂವರು ವ್ಯಕ್ತಿಗಳನ್ನು ಇದ್ರಿಸ್ ಅಲಿ, ಆಜಾದ್ ಶೋಜೈ ಮತ್ತು ರಸೂಲ್ ಅಹ್ಮದ್ ರಸೂಲ್ ಎಂದು ಗುರುತಿಸಲಾಗಿದೆ. ಈ ಮೂವರು ಶಸ್ತ್ರಾಸ್ತ್ರಗಳನ್ನು ಇರಾನ್‌ಗೆ ತರಲು ಯತ್ನಿಸಿದ್ದರು. ಈ ಮೂಲಕ ಇಸ್ರೇಲ್‌ಗೆ ಸಹಕಾರ ಒದಗಿಸಿದ್ದರು ಎಂದು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಮೂವರನ್ನು ಟರ್ಕಿ ಗಡಿಯ ಸಮೀಪದ ಉರ್ಮಿಯಾದಲ್ಲಿ ಇಂದು (ಜೂ.25ರಂದು) ಮರಣದಂಡನೆ ವಿಧಿಸಲಾಗಿದೆ.
ಶಿಕ್ಷೆಗೆ ಗುರಿಯಾದ ಮೂವರು ನೀಲಿ ಜೈಲು ಸಮವಸ್ತ್ರದಲ್ಲಿರುವ ಫೋಟೋಗಳನ್ನು ಇರಾನ್‌ನ ಕೋರ್ಟ್ ಹಂಚಿಕೊಂಡಿದೆ. ಇನ್ನೂ ಸಂಘರ್ಷದ ಸಮಯದಲ್ಲಿ, ಇಸ್ರೇಲ್ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಕನಿಷ್ಠ 700 ಜನರನ್ನು ಬಂಧಿಸಲಾಗಿದೆ.
ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ (Mossad) ಜೊತೆ ಸಂಪರ್ಕದಲ್ಲಿದ್ದ ಗೂಢಚಾರಿಯನ್ನು ಸಹ ಗಲ್ಲಿಗೇರಿಸಲಾಗಿದೆ. ಸುಪ್ರೀಂ ಕೋರ್ಟ್ ಸಂಪೂರ್ಣ ವಿಚಾರಣೆ ನಡೆಸಿ ಅಪರಾಧಿಗೆ ಈ ಶಿಕ್ಷೆ ವಿಧಿಸಿದೆ. ಗಲ್ಲಿಗೇರಿಸಲಾದ ಗೂಢಚಾರಿಗೆಯನ್ನು ಮಜೀದ್ ಮೊಸಾಯೆಬಿ ಎಂದು ಗುರುತಿಸಲಾಗಿದೆ ಎಂದು ನ್ಯಾಯಾಂಗದ ಮಿಜಾನ್ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಈತ ಮೊಸಾದ್‌ಗೆ ಇರಾನ್‌ನ ಸೂಕ್ಷ್ಮ ಮಾಹಿತಿಯನ್ನು ಕಳಿಸುತ್ತಿದ್ದ ಎಂದು ತಿಳಿದು ಬಂದಿದೆ.