ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಸಯ್ಯದ್ ಅಲಿ ಖಮೇನಿ ಅವರ ನಿಧನದ ಶೋಕಾಚರಣೆಯ ಸಂದರ್ಭದಲ್ಲಿ ಭಾರತ ಸರ್ಕಾರ ಮತ್ತು ಇಲ್ಲಿನ ಸಾರ್ವಜನಿಕರು ನೀಡಿದ ಅಭೂತಪೂರ್ವ ಬೆಂಬಲಕ್ಕೆ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದೆ.

ಐತಿಹಾಸಿಕ ಸಂಬಂಧದ ಅನಾವರಣ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಇರಾನ್ ರಾಯಭಾರ ಕಚೇರಿ, ಭಾರತದ ಪ್ರಮುಖ ರಾಜಕೀಯ ಮುಖಂಡರು, ಸಂಸದರು, ಬುದ್ಧಿಜೀವಿಗಳು, ವಿದ್ವಾಂಸರು ಹಾಗೂ ವಿವಿಧ ಧರ್ಮಗಳ ಪ್ರತಿನಿಧಿಗಳು ಶೋಕಾಚರಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದನ್ನು ಸ್ಮರಿಸಿದೆ. ಈ ನಾಯಕರ ಭೇಟಿಯು ಇರವೆರಡು ರಾಷ್ಟ್ರಗಳ ನಡುವೆ ಇರುವ ಆಳವಾದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಮಾನವೀಯ ಸಂಬಂಧಗಳನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ ಎಂದು ರಾಯಭಾರ ಕಚೇರಿ ಅಭಿಪ್ರಾಯಪಟ್ಟಿದೆ.


ಶಾಶ್ವತ ಬಾಂಧವ್ಯದ ಪ್ರತೀಕ
ಭಾರತೀಯರು ತೋರ್ಪಡಿಸಿದ ಈ ಅಪಾರ ಸ್ನೇಹ, ಸಹಾನುಭೂತಿ ಮತ್ತು ಗೌರವದ ನಡವಳಿಕೆಯನ್ನು ಇರಾನ್ ದೇಶದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತ ಹಾಗೂ ಇರಾನ್ ನಡುವಿನ ಶಾಶ್ವತ ಮತ್ತು ಗಟ್ಟಿಯಾದ ಸ್ನೇಹ ಬಾಂಧವ್ಯಕ್ಕೆ ಭಾರತದ ಈ ನಡೆ ಅತ್ಯಂತ ಅಮೂಲ್ಯ ಸಾಕ್ಷಿಯಾಗಿದೆ ಎಂದು ಇರಾನ್ ಕೃತಜ್ಞತೆಯ ಸಂದೇಶದಲ್ಲಿ ತಿಳಿಸಿದೆ.



