ಹೊಸದಿಗಂತ ವರದಿ ತುಮಕೂರು :
ಸರಳ ವ್ಯಕ್ತಿತ್ವದಿಂದ ರಾಜಕೀಯದಲ್ಲಿ ಛಾಪು ಮೂಡಿಸಿದ್ದ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (67) (ಬೆಳ್ಳೂರು ಚಂದ್ರಶೇಖರಯ್ಯ ನಾಗೇಶ್) ಅವರು ಅನಾರೋಗ್ಯದ ಕಾರಣದಿಂದ ಮಂಗಳವಾರ ರಾತ್ರಿ ಮೃತರಾಗಿದ್ದಾರೆ.
ತಿಪಟೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಾಗೇಶ್ ಅವರ ನಿಧನಕ್ಕೆ ಸಚಿವ ಸೋಮಣ್ಣ,ಮಾಜಿ ಸಚಿವರಾದ ಸೊಗಡು ಶಿವಣ್ಣ, ಜೆ.ಸಿ. ಮಾಧುಸ್ವಾಮಿ, ಮಾಜಿ ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಬಿ. ಸುರೇಶ್‌ಗೌಡ, ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಸೇರಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಮುಖ ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ವೈಯಕ್ತಿಕ ಹಿನ್ನೆಲೆ
ಜುಲೈ 1, 1959ರಂದು ಬೆಳ್ಳೂರು ಎಸ್. ಚಂದ್ರಶೇಖರಯ್ಯ ದಂಪತಿಗಳ ಮಗನಾಗಿ ಜನಿಸಿದ್ದರು. ಎಂಜಿನಿಯರಿಂಗ್ ಪದವಿ ಪಡೆದು ರಾಜಕೀಯದ ಜತೆಗೆ ಕೃಷಿ ಮತ್ತು ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು.
ರಾಜಕೀಯ ಪ್ರಯಾಣ ಮತ್ತು ಸಂಘಟನಾ ಅನುಭವ
ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಬಿ.ಸಿ. ನಾಗೇಶ್ ಅವರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ತಮ್ಮ ಸಂಘಟನಾ ಪಯಣ ಆರಂಭಿಸಿದರು. ತದನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿಯ ವಿವಿಧ ಹಂತಗಳಲ್ಲಿ ಪ್ರಮುಖ ಸಾಂಸ್ಥಿಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಶಾಸಕರಾಗಿ ಮತ್ತು ಸಚಿವರಾಗಿ ಸೇವೆ:
ಜಿಲ್ಲೆಯ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆ ಪ್ರವೇಶ ಮಾಡಿ ಮೊದಲ ಬಾರಿ 2008 ರಿಂದ 2013 ರವರೆಗೆ ಶಾಸಕರಾಗಿ ಆಯ್ಕೆಯಾದರು. 2013ರ ಚುನಾವಣೆಯಲ್ಲಿ ಸೋಲುಂಡರೂ, ಬಳಿಕ 2018 ರಿಂದ 2023 ರವರೆಗೆ ಎರಡನೇ ಬಾರಿ ಭರ್ಜರಿ ಜಯಗಳಿಸಿ ಶಾಸಕರಾದರು.
ಸಚಿವ ಸ್ಥಾನ: ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರಾಗಿ (ಆಗಸ್ಟ್ 4, 2021 ರಿಂದ ಮೇ 13, 2023) ಸೇವೆ ಸಲ್ಲಿಸಿದರು.
ಸಚಿವರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಇವರು ತೆಗೆದುಕೊಂಡ ಕೆಲವು ನಿರ್ಧಾರಗಳು ವಿಶೇಷವಾಗಿ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಯಮಾವಳಿಗಳ ಕಟ್ಟುನಿಟ್ಟಿನ ಜಾರಿ ಹಾಗೂ ಪಠ್ಯಪುಸ್ತಕ ಪರಿಷ್ಕರಣೆ ವಿಚಾರಗಳು ರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಗೆ ಕಾರಣವಾಗಿದ್ದವು.
ಇತ್ತೀಚಿನ ರಾಜಕೀಯ ಬೆಳವಣಿಗೆ
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿ.ಸಿ. ನಾಗೇಶ್ ಅವರು, ಕಾಂಗ್ರೆಸ್ ಅಭ್ಯರ್ಥಿ ಕೆ. ಷಡಕ್ಷರಿ ಅವರ ವಿರುದ್ಧ ಪರಾಭವಗೊಂಡರು. ಪ್ರಸ್ತುತ ಅವರು ಬಿಜೆಪಿಯ ಹಿರಿಯ ಮುಖಂಡರಾಗಿ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ಅಂತಿಮ ದರುಶನ:
ಬುಧವಾರ ಬೆಳಗ್ಗೆ ತಿಪಟೂರಿನಲ್ಲಿ ನಾಗೇಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರುಶನಕ್ಕಾಗಿ ವ್ಯವಸ್ಥೆಗೊಳಿಸಲಾಗಿದೆ. ಮೃತರ ಅಂತ್ಯಕ್ರಿಯೆಯನ್ನು ಅವರ ಸ್ವಂತ ತೋಟದಲ್ಲೇ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.



