ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದಲ್ಲಿ ಉಂಟಾದ ಬಿಕ್ಕಟ್ಟು ವಿಶ್ವವನ್ನೇ ಬೆಚ್ಚಿಬೀಳಿಸಿದ್ದು, ಎಲ್ಲಾ ರಾಷ್ಟ್ರಗಳು ಸಂಯಮವನ್ನು ಕಾಪಾಡಿಕೊಳ್ಳಬೇಕು ಮತ್ತು ಸಂಘರ್ಷದ ಆಯಾಮವನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಭಾರತ ಕರೆ ನೀಡಿದೆ.
ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಉಗ್ರಗಾಮಿ ಸಂಘಟನೆಯ ಇತರ ಕಮಾಂಡರ್‌ಗಳ ಹತ್ಯೆಯ ಪ್ರತಿಯಾಗಿ ಇಸ್ರೇಲ್ ಮೇಲೆ ಇರಾನ್ ಸುಮಾರು 200 ಕ್ಷಿಪಣಿಗಳನ್ನು ಹಾರಿಸಿದೆ.ಇದರ ಬೆನ್ನಲ್ಲೇ ಭಾರತ ಹೇಳಿಕೆ ನೀಡಿದೆ.
ಪಶ್ಚಿಮ ಏಷ್ಯಾದಲ್ಲಿ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಕುರಿತು ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಜತೆಗೆ, ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದೆ.
‘ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ಸಂಬಂಧಪಟ್ಟ ರಾಷ್ಟ್ರಗಳು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಹಾಗೂ ನಾಗರಿಕರ ರಕ್ಷಣೆಗಾಗಿ ನಮ್ಮ ಕರೆಯನ್ನು ಪುನರುಚ್ಚರಿಸುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅನಗತ್ಯ ಪ್ರಯಾಣ ಬೇಡ
ಇದೇ ವೇಳೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ.
ಇರಾನ್ ಕ್ಷಿಪಣಿ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಭಾರತೀಯ ನಾಗರಿಕರು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳು ಒದಗಿಸಿದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚಿಸಿದೆ. ‘ಸಾಧ್ಯವಾದಷ್ಟು ಇರಾನ್‌ಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಿ, ಸಚಿವಾಲಯ ಪರಿಸ್ಥಿತಿಯನ್ನು ಗಮನಿಸುತ್ತಿದೆ. ಪ್ರಸ್ತುತ ಇರಾನ್‌ನಲ್ಲಿ ನೆಲೆಸಿದವರೂ ಜಾಗರೂಕರಾಗಿರಿ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ’ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.