September 16, 2026
Wednesday, September 16, 2026
spot_img

ಮಾತುಕತೆಯ ಪ್ರಸ್ತಾಪ ತಳ್ಳಿಹಾಕಿದ ಇರಾನ್: ಮತ್ತಷ್ಟು ತೀವ್ರಗೊಂಡ ಬಲಪ್ರದರ್ಶನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ಉತ್ಸುಕವಾಗಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಎಸ್ಮಾಯಿಲ್ ಬಘೈ ಕಡ್ಡಾಯವಾಗಿ ನಿರಾಕರಿಸಿದ್ದಾರೆ. ಸದ್ಯಕ್ಕೆ ಅಮೆರಿಕದೊಂದಿಗೆ ಯಾವುದೇ ಸಂಧಾನದ ಆಲೋಚನೆ ತಮಗಿಲ್ಲ ಎಂದಿರುವ ಅವರು, ದೇಶದ ರಕ್ಷಣೆಯೇ ಪ್ರಸ್ತುತ ತಮ್ಮ ಏಕೈಕ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.

ಶಾಂತಿ ಒಪ್ಪಂದಕ್ಕೆ ಎಳ್ಳುನೀರು

ಹಾರ್ಮುಜ್ ಜಲಸಂಧಿಯ ಬಳಿ ಅಮೆರಿಕ ಪಡೆಗಳು ನಿರಂತರವಾಗಿ ನಡೆಸುತ್ತಿರುವ ದಾಳಿಯಿಂದಾಗಿ, ಜೂನ್ 17ರಂದು ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ 14 ಅಂಶಗಳ ಶಾಂತಿ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಇರಾನ್ ಅಧಿಕೃತವಾಗಿ ಘೋಷಿಸಿದೆ. ಮೊದಲ ನಿಯಮವನ್ನೇ ಗಾಳಿಗೆ ತೂರಿ, ನಮ್ಮ ನಗರಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿರುವ ಅಮೆರಿಕದ ಪ್ರತಿಯೊಂದು ಕ್ರಮಕ್ಕೂ ಸಶಸ್ತ್ರ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡಲಿವೆ ಎಂದು ಇರಾನ್‌ನ ಉನ್ನತ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್ ಎಚ್ಚರಿಸಿದ್ದಾರೆ.

ಪ್ರಮುಖ ನಗರಗಳು ಹಾಗೂ ಪರಮಾಣು ಸ್ಥಾವರದ ಮೇಲೆ ದಾಳಿ

ವಾಣಿಜ್ಯ ಹಡಗುಗಳ ಸಂಚಾರಕ್ಕೆ ಇರಾನ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿರುವ ಯುಎಸ್ ಸೆಂಟ್ರಲ್ ಕಮಾಂಡ್, ಬುಧವಾರದಂದು ಇರಾನ್‌ನ ಪ್ರಮುಖ ಬಂದರು ನಗರಿಗಳಾದ ಬಂದರ್ ಅಬ್ಬಾಸ್, ರಾಸ್ಕ್, ಚಬಹಾರ್ ಹಾಗೂ ಕ್ವೆಶ್ಮ್‌ಗಳ ಮೇಲೆ ಭೀಕರ ವಾಯುದಾಳಿ ನಡೆಸಿದೆ. ಇರಾನ್‌ನ ಏಕೈಕ ನಾಗರಿಕ ಪರಮಾಣು ವಿದ್ಯುತ್ ಸ್ಥಾವರವಿರುವ ‘ಬುಶೆಹರ್’ ಮೇಲೂ ಬಾಂಬ್ ದಾಳಿಯಾಗಿದ್ದು, ಆಮದು ಪ್ರಕ್ರಿಯೆಗೆ ತಡೆಯೊಡ್ಡಲು ಖಾಲಿ ತೈಲ ಟ್ಯಾಂಕರ್ ಒಂದನ್ನು ಅಮೆರಿಕ ವಾಯುಪಡೆ ನಿಷ್ಕ್ರಿಯಗೊಳಿಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !