ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮತ್ತು ಇರಾನ್ ನಡುವಿನ ದಶಕಗಳ ಹಳೆಯ ರಾಜತಾಂತ್ರಿಕ ಬಿಕ್ಕಟ್ಟನ್ನು ಕೊನೆಗೊಳಿಸಲು ಇರಾನ್ ಸರ್ಕಾರವು ಅತ್ಯಂತ ರಹಸ್ಯ ಹಾಗೂ ಜಾಣ್ಮೆಯ ತಂತ್ರವೊಂದನ್ನು ಹೆಣೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶಿಷ್ಟ ನಿರ್ಧಾರಗಳು ಮತ್ತು ಮೂಡ್ ಬದಲಾವಣೆಗಳನ್ನು ಸೂಕ್ಷ್ಮವಾಗಿ ನಿಭಾಯಿಸಲು ಇರಾನ್ ತನ್ನ ಉನ್ನತ ರಾಜತಾಂತ್ರಿಕ ತಂಡಕ್ಕೆ ಇಬ್ಬರು ಹಿರಿಯ ಮನಶ್ಶಾಸ್ತ್ರಜ್ಞರನ್ನು ಸೇರಿಸಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬದಲಾದ ಸಂದೇಶ ಶೈಲಿ; ಸಕಾರಾತ್ಮಕ ಪ್ರತಿಕ್ರಿಯೆ
ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಪರೋಕ್ಷ ಮಾತುಕತೆಯ ನಂತರ ಈ ಇಬ್ಬರು ಸೈಕಾಲಜಿಸ್ಟ್‌ಗಳನ್ನು ತಂಡಕ್ಕೆ ಸೇರಿಸಲಾಯಿತು. ಟ್ರಂಪ್ ಅವರ ಮನಸ್ಥಿತಿಯನ್ನು ಅಧ್ಯಯನ ಮಾಡಿದ ತಜ್ಞರು, ಅಮೆರಿಕಕ್ಕೆ ಕಳುಹಿಸುವ ಅಧಿಕೃತ ಲಿಖಿತ ಪತ್ರಗಳು ಯಾವ ಶೈಲಿಯಲ್ಲಿರಬೇಕು ಎಂದು ಮಾರ್ಗದರ್ಶನ ನೀಡಿದರು. ಈ ಹೊಸ ‘ಮೈಂಡ್ ಗೇಮ್’ ತಂತ್ರಗಾರಿಕೆಯ ನಂತರ ಟ್ರಂಪ್ ಅವರಿಂದ ಬಂದ ಪ್ರತಿಕ್ರಿಯೆಗಳು ಹೆಚ್ಚು ಸಕಾರಾತ್ಮಕವಾಗಿದ್ದವು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಜೂನ್ 19 ರಂದು ಜಿನೀವಾದಲ್ಲಿ ಐತಿಹಾಸಿಕ ಒಪ್ಪಂದ
ಮಾತುಕತೆಯ ಪ್ರತಿ ಪಠ್ಯವೂ ಭವಿಷ್ಯದಲ್ಲಿ ಐತಿಹಾಸಿಕ ದಾಖಲೆಯಾಗಲಿದ್ದು, ಜಗತ್ತಿಗೆ ಇರಾನಿನ ಮುತ್ಸದ್ದಿತನ ತಿಳಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಈ ಭಿನ್ನ ಪ್ರಯತ್ನಗಳ ಫಲವಾಗಿ ಉಭಯ ದೇಶಗಳು ಪ್ರಾಥಮಿಕ ತಿಳುವಳಿಕೆ ಒಪ್ಪಂದಕ್ಕೆ (MoU) ಸಮ್ಮತಿಸಿವೆ. ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಈ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಬೀಳುವ ಸಾಧ್ಯತೆಯಿದೆ.



