ಹೊಸದಿಗಂತ ವರದಿ, ಕಲಬುರಗಿ:
ಕೆಇಎ ಪರೀಕ್ಷೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾಗಿರುವವರು ಯಾರೇ ಆಗಿರಲಿ,ಅಂತವರನ್ನು ನಾವು ರಕ್ಷಣೆ ಹಾಗೂ ದಯೇ ತೋರುವ ಮಾತೇ ಉದ್ಭವಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪರೀಕ್ಷೆಯಲ್ಲಿ ಅಕ್ರಮವೆಸಗಿದ ೨೦ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಲಾಗಿದೆ.ಅಕ್ರಮದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಬಂಧನಕ್ಕೆ ವಿಶೇಷ ತಂಡಗಳನ್ನು ಸಹ ರಚನೆ ಮಾಡಲಾಗಿದೆ ಎಂದರು.
ಎಫಡಿಎ ಪರೀಕ್ಷೆ ಅಕ್ರಮ ನಡೆದ ಬಳಿಕ ಆರ್.ಡಿ.ಪಾಟೀಲ ಅವರ ಲೊಕೇಶನ್ ಇತರೇ ಬೇರೆ ರಾಜ್ಯಗಳಲ್ಲಿ ತೋರಿಸುತ್ತಿತ್ತು.ಹಿಂದೆ ಎಲ್ಲೆಲ್ಲಿ ತಿರುಗಾಟ ನಡೆಸಿದ್ದಾರೆ.ಯಾರ ಯಾರು ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಹುಡುಕುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಕಿಂಗ್ ಪಿನ್ ಆರ್.ಡಿ.ಪಾಟೀಲ ಮತ್ತು ಆತನ ತಂಡದೊಂದಿಗೆ ಕಾಂಗ್ರೆಸ್ ಸರ್ಕಾರದ ಬೆಂಬಲವಿದೆ ಎಂಬ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಅವರದ್ದೇ ಗೃಹ ಸಚಿವರು ಖುದ್ದು ಪಿಎಸ್ಐ ಹಗರಣದ ಆರೋಪಿ ಮನೆಗೆ ಹೋಗಿ ಕಾಜು,ಬದಾಮ ತಿಂದು ಬಂದಿದ್ದು ನಾವೆಲ್ಲರೂ ನೋಡಿದ್ದೇವೆ.ಹೀಗಾಗಿ ಗಾಳಿಯಲ್ಲಿ ಗುಂಡು ಹಾರಿಸುವುದು ಬಿಜೆಪಿ ಪಕ್ಷದವರು ಮೊದಲು ಬಿಟ್ಟುಬಿಡಲಿ ಎಂದ ಅವರು,ಗೃಹ ಸಚಿವರು ಸಹ ಆರೋಪಿಯ ಬಂಧನ ಮಾಡಲಾಗುವುದು ಎಂದು ಹೇಳಿದ್ದಾರೆ ಎಂದು ತಿಳಿಸಿದರು.