ಹೊಸದಿಗಂತ ವರದಿ, ಹಾಸನ:
ಸಂಕಷ್ಟ ಸಂದರ್ಭದಲ್ಲಿ ರಾಜ್ಯಗಳಿಗೆ ಮೀಸಲಿಡುವ ಎನ್‌ಡಿಆರ್‌ಫ್ ಅನುದಾನವನ್ನು ನಾವು ಕೇಳುತ್ತಿದ್ದೇವೆಯೋ ಹೊರತು, ಕೇಂದ್ರವೇ ಹಣ ಭರಿಸಬೇಕು ಎಂದು ಎಲ್ಲೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಾಸನಾಂಬೆ ದರ್ಶನ ಪಡೆದ ಬಳಿಕ ಮಂಗಳವಾರ ಮಾತನಾಡಿದ ಅವರು, ರಾಜ್ಯದ ೨೧೬ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ ಕೆಲ ತಾಲೂಕು ಈ ಪಟ್ಟಿಗೆ ಸೇರ್ಪಡೆಯಾಗಬಹುದು. ಹೆಚ್ಚು ಕಡಿಮೆ ಇಡೀ ರಾಜ್ಯ ಬರದ ಉರಿಯಲ್ಲಿ ಬೇಯುತ್ತಿದೆ. ರಾಜ್ಯದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಬೆಳೆ ಅನಾವೃಷ್ಟಿಗೆ ಹಾಳಾಗಿವೆ ಎಂದರು.
ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ, ೧೭,೯೦೦ ಕೋಟಿ ನೆರವು ನೀಡಿ ಎಂದು ಕೇಂದ್ರಕ್ಕೆ ಎರಡು ಬಾರಿ ಮನವಿ ಸಲ್ಲಿಸಿದ್ದೇವೆ. ನಮ್ಮಲ್ಲಿ ನಷ್ಟವಾಗಿರುವುದು ೩೪,೭೦೦ ಕೋಟಿಯಷ್ಟು. ಅದಾದ ಬಳಿಕ ಕೇಂದ್ರದ ಮೂರು ತಂಡಗಳು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರನ್ನು ಭೇಟಿ ಮಾಡಿ ಹೋದವು. ಆದರೆ ೨೦ ದಿನ ಕಳೆದರೂ ಈವರೆಗೂ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ ಎಂದು ದೂರಿದರು.
ಕೆಲವರು ರಾಜ್ಯ ಸರ್ಕಾರ ಕೇಂದ್ರದಿಂದ ಉಚಿತವಾಗಿ ಅನುದಾನ ಕೇಳುತ್ತಿದೆ ಎಂದು ಹೇಳುತ್ತಾರೆ. ಆದರೆ ವರ್ಷಕ್ಕೆ ರಾಜ್ಯದಿಂದ ೪ ಲಕ್ಷ ಕೋಟಿ ತೆರಿಗೆ ಹಣ ಕೇಂದ್ರಕ್ಕೆ ಹೋಗಲಿದೆ. ಈ ಹಣವನ್ನು ರಾಷ್ಟ್ರೀಯ ಹಣಕಾಸು ಆಯೋಗದ ನಿರ್ದೇಶನದ ಪ್ರಕಾರ, ಇಂತಿಷ್ಟು ಹಣವನ್ನು ವಿವಿಧ ರೀತಿಯ ಸಂಕಷ್ಟಕ್ಕೆ ಸಿಲುಕುವ ರಾಜ್ಯಗಳಿಗೆ ಮೀಸಲಿಡಬೇಕು ಎಂಬ ನಿಯಮ ಇದೆ. ಅದನ್ನೇ ನಾವು ಕೇಳುತ್ತಿದ್ದೇವೆ. ಎಲ್ಲ ಕಾಲದಲ್ಲೂ ಇದು ನಡೆಯುತ್ತ ಬಂದಿದೆ. ನಾವು ಕೇಂದ್ರದ ಜೊತೆ ಜಗಳ ಮಾಡುತ್ತಿಲ್ಲ. ಮೂರು ಜನ ಮಂತ್ರಿಗಳನ್ನು ದೆಹಲಿಗೆ ಕಳಿಸಿದೆ, ಆದರೆ ಯಾವುದೇ ಸಚಿವರೂ ಭೇಟಿಗೆ ಸಿಗಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ವಿಪಕ್ಷದವರು ಈ ಬಗ್ಗೆ ಮಾತನಾಡುತ್ತಿಲ್ಲ. ಅವರೂ ಬರ ಅಧ್ಯಯನ ಮಾಡಲಿ, ಅದರ ಜೊತೆಯಲ್ಲೇ ಕೇಂದ್ರವನ್ನೂ ಕೇಳಲಿ, ಆದರೆ ನಿಯಮಾವಳಿ ಪ್ರಕಾರ ನಮಗೆ ಪರಿಹಾರ ಕೊಡಿಸಲಿ, ಈಗ ಎನ್‌ಡಿಎ ಸೇರಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಈ ಬಗ್ಗೆ ಮಾತಾಡಲಿ ಎಂದರು.
ಇದಕ್ಕೂ ಮುನ್ನ ಪ್ರವಾಸಿ ಮಂದಿರ ಬಳಿ ಮಾತನಾಡಿದ ಸಿಎಂ, ಬೇರೆ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಬನ್ನಿ ಅಂತ ನಾವು ಕರೆಯುತ್ತಿಲ್ಲ. ಯಾವತ್ತೂ ಆಹ್ವಾನಿಸಲ್ಲ, ಆದರೆ ಪಕ್ಷದ ನಾಯಕತ್ವ, ತತ್ವ ಸಿದ್ಧಾಂತ ಒಪ್ಪಿಕೊಂಡು ಬರುವವರು ಬಂದರೆ ಸ್ವಾಗತ ಎಂದರು.
ಕೆಎಂ ಶಿವಲಿಂಗೇಗೌಡರು ಮಂತ್ರಿ ಪಟ್ಟಿಯಲ್ಲಿದ್ದಾರೆ
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ಅವರ ಹೆಸರೂ ಪಟ್ಟಿಯಲ್ಲಿದೆ, ಮುಂದಿನ ದಿನಗಳಲ್ಲ ಮಂತ್ರಿ ಆಗಲಿದ್ದಾರೆ ಎಂದು ಸುಳಿವು ನೀಡಿದರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಇದ್ದರು.