ಹೊಸದಿಗಂತ ವರದಿ,ಕಲಬುರಗಿ :
ಕೆಇಎ ನಡೆಸುತ್ತಿರುವ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರ ಪೋಲಿಸ್ ಆಯುಕ್ತ ಆರ್.ಚೇತನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದು, ಅಭ್ಯರ್ಥಿ ತ್ರಿಮೂರ್ತಿ ಹಾಗೂ ಅಭ್ಯರ್ಥಿ ಸಹೋದರ ಅಂಬರೀಷ್ ಮತ್ತು ಆರ್.ಡಿ.ಪಾಟೀಲ್ ವಿರುದ್ಧ ನಗರದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ ಎಂದರು.
ಅಭ್ಯರ್ಥಿ ತ್ರಿಮೂರ್ತಿ ತನ್ನ ಎಡಗಡೆಯ ಕಿವಿಯಲ್ಲಿ ಬ್ಲೂಟೂತ್ ಇಟ್ಟುಕೊಂಡು ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದಾನೆ.ಪರೀಕ್ಷಾ ಕೇಂದ್ರದ ಹೊರಗಡೆ ಕಾರ್,ನಲ್ಲಿ ಕುಳಿತುಕೊಂಡು ಆತನ ಸಹೋದರ ಅಂಬರೀಷ್ ಕೀ ಉತ್ತರಗಳನ್ನು ಹೇಳುತ್ತಿದ್ದ ಎಂದು ತಿಳಿದುಬಂದಿದ್ದು, ಅಂಬರೀಷ್,ಗೆ ಆರ್.ಡಿ.ಪಾಟೀಲ್ ಹಾಗೂ ಆತನ ಸಂಗಡಿಗರಿಂದ ಕೀ ಉತ್ತರಗಳು ದೊರೆಯುತ್ತಿದ್ದವು ಎಂದು ಮಾಹಿತಿ ಬಂದಿದೆ ಎಂದರು.
ಪರೀಕ್ಷಾ ಕೇಂದ್ರದ ಸುಪ್ರವೈಜರ್ ಶಿಲ್ಪಾ ಚನ್ನವೀರ ಚಕ್ಕಿ ದೂರಿನಡಿ ದೂರು ದಾಖಲಾಗಿದ್ದು, ಐಪಿಸಿ ೪೨೦,೧೨೦ಬಿ,೧೦೯,೧೧೪,೩೬,೩೭,೩೪, ಅಡಿಯಲ್ಲಿ ದೂರು ದಾಖಲಾಗಿದೆ ಎಂದ ಅವರು, ತನಿಖೆ ನಂತರವೇ ಅಕ್ರಮದ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ಹೇಳಿದರು.