ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ಮಕ್ಕಳು ‘ಅ ಆ ಇ ಈ’ ಎಂದು ಪಾಠ ಕೇಳ್ತಾ ಕೂತಿದ್ರು. ಮೇಷ್ಟ್ರು ಹೇಳಿಕೊಡೋದನ್ನ ಮನಸ್ಸಿನಲ್ಲೇ ನೆನಪು ಮಾಡಿಕೊಳ್ತಾ ಇದ್ದ ಆ ಪುಟ್ಟ ಕಂದಮ್ಮಗಳ ತಲೆ ಮೇಲೆ ದಿಢೀರನೆ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಸುತ್ತಲೂ ಧೂಳು, ಮಕ್ಕಳ ಚೀರಾಟ… ಆ ಕ್ಷಣದಲ್ಲಿ ಅಲ್ಲಿನ ವಾತಾವರಣ ಹೇಗಿರಬೇಡ ಊಹಿಸಿ?
ಆರು ಜನ ಮಕ್ಕಳು ಸೇಫ್
ಅದೃಷ್ಟ ಚೆನ್ನಾಗಿತ್ತು. ಆರು ಜನ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ತಕ್ಷಣವೇ ಎಚ್ಚೆತ್ತ ಶಾಲೆಯ ಸಿಬ್ಬಂದಿ ಮತ್ತು ಸ್ಥಳೀಯರು ಗಾಯಗೊಂಡ ಆರು ಜನ ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. “ಮಕ್ಕಳೆಲ್ಲಾ ಆರಾಮಾಗಿದ್ದಾರೆ, ಯಾರಿಗೂ ಪ್ರಾಣಾಪಾಯವಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ” ಎಂದು ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಒ ಗಜಾನನ ಬಾಳೆ ಅವರು ತಿಳಿಸಿದ್ದು, ಪೋಷಕರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
ಅಧಿಕಾರಿಗಳ ಭೇಟಿ
ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಾಲೆಗೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಅಲ್ಲದೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ತಕ್ಷಣವೇ ಶಾಲೆಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಅಸಲಿ ಪ್ರಶ್ನೆ ಶುರುವಾಗೋದೇ ಈಗ
ಯಾವುದೇ ಒಂದು ಅನಾಹುತ ನಡೆದ ಮೇಲಷ್ಟೇ ಅಧಿಕಾರಿಗಳು ಓಡೋಡಿ ಬರೋದ್ಯಾಕೆ? ಆ ಶಾಲೆ ಕಟ್ಟಡ ಸಂಪೂರ್ಣವಾಗಿ ಬಿದ್ದು ಹೋಗೋ ಸ್ಥಿತಿಯಲ್ಲಿದೆ, ಹಳೆಯದಾಗಿದೆ ಎಂದು ಊರಿನ ಜನ, ಪೋಷಕರು ಎಷ್ಟೋ ಬಾರಿ ಹೇಳಿದ್ರೂ ಯಾರೂ ಕಿವಿಗೆ ಹಾಕೊಂಡಿರಲಿಲ್ಲ. ಇವತ್ತು ಅದೃಷ್ಟ ಚೆನ್ನಾಗಿತ್ತು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಏನಾದರೂ ಹೆಚ್ಚು-ಕಡಿಮೆ ಆಗಿದ್ದರೆ, ಅದಕ್ಕೆ ಹೊಣೆ ಯಾರಾಗ್ತಿದ್ರು? ಅಧಿಕಾರಿಗಳು ಕೊಡುವ ಈ “ತಕ್ಷಣದ ರಿಪೇರಿ” ಆಶ್ವಾಸನೆ ಮಕ್ಕಳ ಜೀವ ತಂದುಕೊಡೋಕೆ ಸಾಧ್ಯವಿತ್ತಾ? ಎಂದು ಇಲ್ಲಿನ ಸಾರ್ವಜನಿಕರು ಮತ್ತು ಪೋಷಕರು ಕೇಳ್ತಿರೋ ಪ್ರಶ್ನೆ.
ಪ್ರತಿಯೊಬ್ಬ ಬಡವ ತನ್ನ ಮಗುವನ್ನು ಸರ್ಕಾರಿ ಶಾಲೆಗೆ ಕಳುಹಿಸೋದು ‘ನಮ್ಮ ಮಗು ಓದಿ ದೊಡ್ಡ ವ್ಯಕ್ತಿಯಾಗಲಿ’ ಅನ್ನೋ ಆಸೆಯಿಂದ. ಆದ್ರೆ, ಶಾಲೆ ಗೋಡೆಗಳು, ಛಾವಣಿಗಳು ಈ ರೀತಿ ತಲೆ ಮೇಲೆ ಬೀಳೋ ಹಾಗಿದ್ರೆ, ಆ ತಂದೆ-ತಾಯಿಗಳು ನೆಮ್ಮದಿಯಿಂದ ಕೆಲಸಕ್ಕೆ ಹೋಗೋಕೆ ಸಾಧ್ಯಾನಾ?
ಈಗ ಬಾಗಲಕೋಟೆಯ ಮೊಗಲೋಳಿ ತಾಂಡಾದ ಜನರು, ಪೋಷಕರು ಸುಮ್ಮನೆ ಕೂರೋಕೆ ತಯಾರಿಲ್ಲ. “ನಮಗೆ ಬರೀ ಕಣ್ಣೊರೆಸೋ ರಿಪೇರಿ ಕೆಲಸ ಬೇಡ, ಶಾಶ್ವತವಾಗಿ ಶಾಲೆ ಗಟ್ಟಿಮುಟ್ಟಾಗಬೇಕು. ನಮ್ಮ ಮಕ್ಕಳು ಭಯವಿಲ್ಲದೆ ಶಾಲೆಗೆ ಹೋಗೋ ವಾತಾವರಣ ನಿರ್ಮಾಣವಾಗಬೇಕು” ಎಂದು ಒತ್ತಾಯಿಸುತ್ತಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು, ಸರ್ಕಾರ ಕೇವಲ ಈ ಒಂದು ಶಾಲೆಗೆ ಸುಣ್ಣ-ಬಣ್ಣ ಬಳಿದು ಕೈ ತೊಳೆದುಕೊಳ್ಳದೆ, ರಾಜ್ಯಾದ್ಯಂತ ಇರೋ ಎಲ್ಲಾ ಜೀರ್ಣಾವಸ್ಥೆಯಲ್ಲಿರೋ ಸರ್ಕಾರಿ ಶಾಲೆಗಳನ್ನ ಗುರುತಿಸಿ, ಕಾಂಕ್ರೀಟ್ ರೀತಿಯಲ್ಲಿ ಗಟ್ಟಿಮುಟ್ಟಾದ ಕಟ್ಟಡಗಳನ್ನು ಕಟ್ಟಿಸಿಕೊಡಬೇಕಿದೆ.



